ಒಂದು ಕಡೆ ಉಚಿತ ಕೊಡುಗೆ, ಇನ್ನೊಂದು ಕಡೆ ಖಚಿತ ಸುಲಿಗೆ: ಜೆಡಿಎಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಜೆಡಿಎಸ್ ವಾಗ್ದಾಳಿ ನಡೆಸುತ್ತಿದ್ದು, ಕಾಂಗ್ರೆಸ್‌ ಸರ್ಕಾರದ ಯೋಜನೆ ಮತ್ತು ದರ ಹೆಚ್ಚಳದ ಕುರಿತಾಗಿ ಟೀಕಿಸಿದೆ.

ಸರಣಿ ಟ್ವಿಟ್ ಮೂಲಕ ‌ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಒಂದು ಕಡೆ ಉಚಿತ ಕೊಡುಗೆ, ಇನ್ನೊಂದು ಕಡೆ ಖಚಿತ ಸುಲಿಗೆ ಎಂದು ವಾಗ್ದಾಳಿ ನಡೆಸಿದೆ.

ಜೆಡಿಎಸ್ ಟ್ವಿಟರ್‌ ಖಾತೆಯಲ್ಲಿ, “ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ. ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!!” ಎಂದು ಟ್ವೀಟ್‌ ಮಾಡಿದ್ದಾರೆ.

ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟ ಸರಕಾರ ಕೊಡುತ್ತಿರುವ ವರ್ಗಾವಣೆ ‘ಸಂಕಷ್ಟಭಾಗ್ಯ‘ ವರ್ಣಿಸದಸಳ. ಕೊಡುಗೆ ಮತ್ತು ಸುಲಿಗೆ ಒಟ್ಟೊಟ್ಟಿಗೆ ಕೊಂಡೊಯ್ಯುವುದೇ ಅಭಿವೃದ್ದಿಯ ಹೊಸ ಭರವಸೆ, ಹೊಸ ಕನಸು ಎಂಬುದು ನನಗೆ ಈಗಷ್ಟೇ ಅರ್ಥವಾಗಿದೆ. ಕರ್ನಾಟಕ ಮಾದರಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.

ಈ ಸರಕಾರ ಬಂದು ಎರಡು ತಿಂಗಳೂ ಕಳೆದಿಲ್ಲ. ಆಗಲೇ ಕಾಸಿಗಾಗಿ ಹುದ್ದೆ ಬಿಸ್ನೆಸ್ ಪರಾಕಾಷ್ಠೆ ಮುಟ್ಟಿದ್ದು, ಇವರು ವರ್ಗಾವಣೆ ಅಂಕದಲ್ಲಿ ‘ ಪರಕಾಯ ಪ್ರವೇಶ ‘ ಮಾಡಿದ್ದಾರೆ. ಗ್ಯಾರಂಟಿ, ಭಾಗ್ಯಗಳ ಮೂಲಕ ಜನರನ್ನು ಯಾಮಾರಿಸಿ ಇವರು ಹುಂಡಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ ಮಾಡಿ ಪ್ರಚಾರ ಮಾಡಿತ್ತು. ಈಗ ಕೈ ಸರಕಾರದ ರೇಟ್ ಕಾರ್ಡ್ ಎಲ್ಲರ ಕೈಗಳಲ್ಲೂ ನಲಿದು ನರ್ತಿಸುತ್ತಿದೆ. ಸರಕಾರದ ‘ ಅಧಿಕೃತ ಅರ್ಥನೀತಿ ‘ ಆಗಿದೆ ಎಂದಿದ್ದಾರೆ.

ಹನಿಮೂನ್ ಪೀರಿಯಡ್ ಹೊತ್ತಿನಲ್ಲೇ ಹೀಗಾದರೆ ಫುಲ್ ಮೂನ್ ಸಮಯದಲ್ಲಿ ಇದು ಇನ್ನಾವ ಹಂತಕ್ಕೆ ಹೋಗಲಿದೆ ಎನ್ನುವ ಊಹೆ ಜನರಿಗೇ ಬಿಟ್ಟಿದ್ದು. ಇಂಥ ಕಮಿಷನ್’ಗೇಡಿ ಸರಕಾರದ ಬಗ್ಗೆ ಸರಕಾರಿ ನೌಕರರು, ಅಧಿಕಾರಿಗಳು ಆತಂಕಗೊಂಡಿದ್ದಾರೆ. ಜನರಲ್ಲೂ ಆಕ್ರೋಶ ಮಡುಗಟ್ಟಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!