ಹೊಸದಿಗಂತ ಡಿಜಿಟಲ್ ಡೆಸ್ಕ್ :
ಜಗತ್ತಿನಲ್ಲಿ ಹಲವು ದೇಶಗಳು ಇಂದು ಸೈಬರ್ ದಾಳಿಗೆ ಗುರಿಯಾಗಿವೆ. ಜಗತ್ತಿನ ದೊಡ್ಡ ದೊಡ್ಡ ಆರ್ಥಿಕತೆಗೂ ಸವಾಲಾಗಿ ಪರಿಣಮಿಸಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೈಬರ್ ಅಪರಾಧ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಗುರುವಾರ ನಡೆದ ಜಿ20 ಸಮ್ಮೇಳನದಲ್ಲಿ ಮಾತನಾಡಿದ ಅವರು, ಸೈಬರ್ ದಾಳಿಯಿಂದಾಗಿ 2019-23ರ ಅವಧಿಯಲ್ಲಿ 5.2 ಟ್ರಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ. ಸೈಬರ್ ದಾಳಿಕೋರರು ಕ್ರಿಪ್ಟೊ ಕರೆನ್ಸಿ ಬಳಸುತ್ತಿರುವುದರಿಂದ ಅಪರಾಧಗಳ ಪತ್ತೆ ಮತ್ತು ನಿಯಂತ್ರಣ ಅತ್ಯಂತ ಸಂಕೀರ್ಣಗೊಳ್ಳುತ್ತಾ ಸಾಗಿದೆ’ ಎಂದು ತಿಳಿಸಿದರು.
ಇಂಥ ತೊಂದರೆಗಳಿಂದ ನಾವು ಪಾರಾಗಲು ತುರ್ತು ಸ್ಪಂದನ ತಂಡಗಳನ್ನು ಬಲವರ್ಧನೆಗೊಳಿಸಬೇಕಾದ ಅಗತ್ಯವಿದ್ದು, 24X7 ಆಧಾರದಲ್ಲಿ ಭದ್ರತಾ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.
ಜಗತ್ತಿನಲ್ಲಿ ವಿಕಸನಗೊಂಡಿರುವ ಭದ್ರತಾ ಸವಾಲುಗಳ ಬಗ್ಗೆ ಜಾಗತಿಕ ಸಮುದಾಯವನ್ನು ಎಚ್ಚರಿಸಿದ ಶಾ , ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿ20 ರಾಷ್ಟ್ರಗಳು ಸಾಂಪ್ರದಾಯಿಕ ಎಲ್ಲೆಗಳನ್ನು ದಾಟಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಜಿ20 ಈ ವರೆಗೆ ತನ್ನ ಗಮನವನ್ನು ಡಿಜಿಟಲ್ ಆರ್ಥಿಕತೆ ರೂಪಾಂತರ ಮತ್ತು ದತ್ತಾಂಶ ಹರಿವಿನ ಮೇಲೆ ಮಾತ್ರ ಕೇಂದ್ರೀಕರಿಸಿತ್ತು. ಆದರೆ ಈಗ ಅಪರಾಧ ಮತ್ತು ಭದ್ರತೆಯ ಅಂಶಗಳನ್ನೂ ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಅಗತ್ಯವಿದೆ. ಸೈಬರ್ ಅಪರಾಧವು ಆತಂಕಕಾರಿ ವಿಚಾರ. ಅದು ರಾಷ್ಟ್ರೀಯ ಭದ್ರತೆ, ಕಾನೂನು-ಸುವ್ಯವಸ್ಥೆ ಮತ್ತು ಆರ್ಥಿಕತೆ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಇಂಥ ಕೃತ್ಯಗಳು ಮತ್ತು ಇದರ ಹಿಂದಿರುವವರನ್ನು ತಡೆಯಬೇಕಿದ್ದರೆ ನಾವು ಗಡಿಗಳ ಎಲ್ಲೆ ಮೀರಿ ಯೋಚಿಸಬೇಕು’ ಎಂದು ಅವರು ಪ್ರತಿಪಾದಿಸಿದರು.
ಎಲ್ಲಾ ದೇಶಗಳ ಕಾನೂನುಗಳಲ್ಲಿ ಏಕರೂಪತೆ ತಂದು, ನಿರ್ದಿಷ್ಠ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಸೈಬರ್ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖೆಯಲ್ಲಿ ಸಹಕಾರ ಇಂದು ಅತ್ಯಂತ ಅವಶ್ಯವಾಗಿದೆ’ ಎಂದು ಅಮಿತ್ ಶಾ ಹೇಳಿದರು.
ಇಂದು ಭಾರತವು ಗುರುತು ದೃಢೀಕರಣಕ್ಕಾಗಿ ‘ಆಧಾರ್’, ತುರ್ತು ಹಣ ವರ್ಗಾವಣೆಗೆ ಯುಪಿಐನಂತ ವಿಶೇಷವಾದ ವ್ಯವಸ್ಥೆ ಹೊಂದಿದೆ. ಮಾಹಿತಿ ಮತ್ತು ಹಣಕಾಸಿನ ಹರಿವನ್ನು ಸುಲಭಗೊಳಿಸಲು ಜಗತ್ತಿಗೆ ಇಂದು ಹೊಸ ಮಾದರಿಯ ಅಗತ್ಯವಿದೆ ಎಂದು ಅವರು ಹೇಳಿದರು.