ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ರಾಜ್ಯದಲ್ಲಿ ಮಳೆಯ ಕಾರಣದಿಂದಾಗಿ ತರಕಾರಿ ಹಣ್ಣುಗಳು ಕೊಳ್ಳೋಕಾಗದಷ್ಟು ದುಬಾರಿಯಾಗಿವೆ. ಇದೇ ಸಾಲಿಗೆ ಹಾಲು ಕೂಡ ಸೇರಲಿದ್ಯಾ?
ಹಾಲಿನ ದರ ಏರಿಕೆ ಬಗ್ಗೆ ಸಾಕಷ್ಟು ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ಪ್ರತೀ ಲೀಟರ್ ಹಾಲಿನ ಬೆಲೆ ಐದು ರೂಪಾಯಿ ಏರಿಕೆ ಬಗ್ಗೆ ಎಲ್ಲಾ ಹಾಲು ಮಾರಾಟ ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಯಲಿದೆ.
ಕೆಮ್‌ಎಫ್ ನಿರ್ದೇಶಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಾಲಿನ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಿ ಎರಡು ವರ್ಷಗಳಾಗಿವೆ, ಇದರಿಂದಾಗಿ 15 ಹಾಲು ಒಕ್ಕೂಟಗಳು ನಷ್ಟದಲ್ಲಿವೆ.
ಇದೀಗ ಲೀ ಟೋನ್ಡ್ ಹಾಲಿನ ಲೀಟರ್ ಬೆಲೆ 39 ರೂಪಾಯಿಗಳಾಗಿವೆ. ಇದರಲ್ಲಿ ಹಾಲು ಉತ್ಪಾದಕರ ಸಂಘಕ್ಕೆ 35.50 ಪೈಸೆ ಹೋಗುತ್ತಿದೆ, ಇನ್ನು ಮಾರಾಟಗಾರರಿಗೆ ಲೀಟರ್‌ಗೆ ಎರಡು ರೂಪಾಯಿ ಕಮಿಷನ್, ಉಳಿದ 1.50 ಪೈಸೆ ಲಾಭದಿಂದ ಯಾವ ವ್ಯವಹಾರವೂ ಆಗುತ್ತಿಲ್ಲ ಎಂದು ಒಕ್ಕೂಟ ಹೇಳುತ್ತಿದೆ.
ಪ್ರತೀ ಲೀಟರ್‌ಗೆ ಐದು ರೂಪಾಯಿ ಹೆಚ್ಚಳಕ್ಕೆ ಅವಕಾಶ ನೀಡದಿದ್ದರೆ ಒಕ್ಕೂಟಗಳು ಸಾಲದ ಸುಳಿಯಲ್ಲಿ ಸಿಲುಕುತ್ತವೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ.