ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪ್ರಾಣವನ್ನು ಲೆಕ್ಕಿಸದೆ ಎಂಟು ವರ್ಷದ ಬಾಲಕಿಯೊಬ್ಬಳು ಬಾವಿಗೆ ಹಾರಿ ತಮ್ಮನನ್ನು ರಕ್ಷಿಸಲು ಮುಂದಾಗಿರುವ ಘಟನೆ ತುಮಕೂರು ತಾಲ್ಲೂಕಿನ ಕುಚ್ಚಂಗಿಯಲ್ಲಿ ನಡೆದಿದೆ.
ಶಾಲೂ ಎಂಬ ಬಾಲಕಿ ತನ್ನ ಏಳು ವರ್ಷದ ಸಹೋದರ ಹಿಮಾಂಶೂನನ್ನು ರಕ್ಷಣೆ ಮಾಡಿದ್ದಾಳೆ. ಕುಚ್ಚಂಗಿಯ ತೋಟದ ಮನೆಯಲ್ಲಿ ಉತ್ತರ ಪ್ರದೇಶ ಮೂಲದ ಜೀತೇಂದ್ರ-ರಾಜಕುಮಾರಿ ದಂಪತಿ ಕೆಲಸ ಮಾಡುತ್ತಿದೆ. ಈ ದಂಪತಿಗೆ ನಾಲ್ವರು ಮಕ್ಕಳಿದ್ದು, ಈ ಪೈಕಿ ಮಗ ಹಿಮಾಂಶೂ ಹಾಗೂ ರಾಶಿ ತೋಟದಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿರುವ ವೇಳೆ ಬಾವಿಗೆ ಬಿದ್ದಿದ್ದ ಚೆಂಡನ್ನು ತೆಗೆಯಲು ಹೋಗಿ ಹಿಮಾಂಶೂ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಇದನ್ನು ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ. ಇದೇ ವೇಳೆ ಅಕ್ಕ-ಪಕ್ಕದ ಜನರು ಸಹ ಶಾಲೂ ಸಹಾಯಕ್ಕೆ ಮುಂದಾಗಿದ್ದಾರೆ. ಬಳಿಕ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಲಾಗಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಶಾಲೂ ಈಜು ಕಲಿಯುತ್ತಿದ್ದಳು. ಲೈಫ್ ಜಾಕೆಟ್ ಧರಿಸಿ ಬಾಡಿಗೆ ಮನೆ ಮಾಲೀಕ ಧನಂಜಯ್ಯ ಎಂಬುವರ ಬಳಿ ಶಾಲೂ ಈಜು ಕಲಿಯುತ್ತಿದ್ದಳು. ಈ ಕಾರಣದಿಂದಾಗಿ ಬಾವಿಗೆ ಹಾಕಿ ತಮ್ಮನ ಪ್ರಾಣವನ್ನು ಶಾಲೂ ರಕ್ಷಿಸಿದ್ದಾಳೆ.