ಹೊಸ ದಿಗಂತ ವರದಿ, ಮಡಿಕೇರಿ:
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಸದ್ಯದ ಮಟ್ಟಿಗೆ ಮುಂಗಾರು ದುರ್ಬಲಗೊಂಡಿರುವುದರಿಂದ ಮುಂದಿನ 5 ದಿನಗಳ ಕಾಲ ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಮುಂಗಾರು ಮಾರುತಗಳು ದಕ್ಷಿಣ ಭಾರತದ ಕರಾವಳಿ ಕರ್ನಾಟಕ, ಕೇರಳ, ಮಾಹೆ ಮತ್ತು ತಮಿಳುನಾಡಿನ ಘಟ್ಟ ಪ್ರದೇಶಗಳಿಗೆ ಮಾತ್ರ ಹೆಚ್ಚು ಸೀಮಿತವಾಗಿರುವುದರಿಂದ, ಆ ಪ್ರದೇಶಗಳಲ್ಲಿ ಮಾತ್ರ ಈ ಅವಧಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕ ತಿಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಕೃಷಿ ಚಟುವಟಿಕೆ ಗರಿಹೆದರಬೇಕಿತ್ತಾದರೂ, ಈ ಬಾರಿ ನಿರೀಕ್ಷಿತ ಮಳೆಯಾಗದ ಕಾರಣ ರೈತರು ಚಿಂತೆಗೆ ಒಳಗಾಗಿದ್ದಾರೆ. ಕೆಲವು ಕಡೆಗಳಲ್ಲಿ ಈ ಬಾರಿ ಭತ್ತದ ಕೃಷಿಯನ್ನು ಕೈ ಬಿಡುವ ಯೋಚನೆಯಲ್ಲಿ ರೈತರಿದ್ದಾರೆ.
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಕೇವಲ 14.41 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 29.43 ಮಿ.ಮೀ. ಮಳೆಯಾಗಿದ್ದರೆ, ವೀರಾಜಪೇಟೆ ತಾಲೂಕಿನಲ್ಲಿ 6.67ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ6.97 ಮಿ.ಮೀ.ಮಳೆ ಬಿದ್ದಿದೆ. ಕಳೆದ ವರ್ಷ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 23.80, ನಾಪೋಕ್ಲು 16.80, ಸಂಪಾಜೆ 47.50, ಭಾಗಮಂಡಲ 29.60, ವೀರಾಜಪೇಟೆ ಕಸಬಾ 8.20, ಹುದಿಕೇರಿ 8.90, ಶ್ರೀಮಂಗಲ 18.60, ಪೊನ್ನಂಪೇಟೆ 4, ಅಮ್ಮತ್ತಿ 2, ಬಾಳೆಲೆ 0.13, ಸೋಮವಾರಪೇಟೆ ಕಸಬಾ 9, ಶನಿವಾರಸಂತೆ 3, ಶಾಂತಳ್ಳಿ 13, ಕೊಡ್ಲಿಪೇಟೆ 2.40, ಕುಶಾಲನಗರ 8.40, ಸುಂಟಿಕೊಪ್ಪ 5.20 ಮಿ.ಮೀ.ಮಳೆ ಬಿದ್ದಿದೆ.
ತುಂಬದ ಹಾರಂಗಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2854.37 ಅಡಿಗಳಿಗೆ ಏರಿಕೆಯಾಗಿತ್ತು. ಆದರೆ ಈ ಬಾರಿ ಕೇವಲ 2841.84 ಅಡಿಗಳಷ್ಟೇ ಭರ್ತಿಯಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಕೂಡಾ ಚಿಂತೆಗೆ ಒಳಗಾಗುವಂತಾಗಿದೆ.
ಪ್ರಸಕ್ತ ಜಲಾಶಯಕ್ಕೆ ನೀರಿನ ಒಳಹರಿವು 1247 ಕ್ಯುಸೆಕ್’ನಷ್ಟಿದ್ದರೆ, ಕಳೆದ ವರ್ಷ ಇದೇ ದಿನಾಂಕದಂದು 13988 ಕ್ಯುಸೆಕ್’ನಷ್ಟಿತ್ತು. ಪ್ರಸಕ್ತ ಜಲಾಶಯದಿಂದ ನದಿಗೆ 50 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನದಿಗೆ 13,166 ಕ್ಯುಸೆಕ್ ಹಾಗೂ ನಾಲೆಗೆ 20 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು.