ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಗೆ ಜಲದಿಗ್ಭಂಧನ ಎದುರರಾಗಿದೆ. ಸತತ ಮೂರು ದಿನಗಳಿಂದ ಪ್ರವಾಹದ ನೀರಿನಲ್ಲಿ ಜೀವನ ಸಾಗಿಸುತ್ತಿದ್ದು, ಪ್ರಸ್ತುತ ಯಮುನಾ ನದಿಯಲ್ಲಿ ಪ್ರವಾಹದ ಪ್ರಮಾಣ ಕೊಂಚ ತಗ್ಗಿದೆ. ಇಂದು ಬೆಳಗ್ಗೆ 6 ಗಂಟೆಗೆ ನೀರಿನ ಮಟ್ಟ 207.68 ಮೀಟರ್ ತಲುಪಿದೆ. ನಗರಕ್ಕೆ ನೀರು ನುಗ್ಗಿದ್ದರಿಂದ ರಸ್ತೆಗಳು ಕೆರೆಗಳಂತೆ ಕಾಣುತ್ತಿವೆ.
ಯಮುನಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದರೂ ದೆಹಲಿಯ ರಸ್ತೆಗಳಲ್ಲಿ ನೀರು ಇಳಿದಿಲ್ಲ. ಐಟಿಒದಲ್ಲಿ ಡ್ರೈನ್ ರೆಗ್ಯುಲೇಟರ್ ರಿಪೇರಿಯನ್ನು ಸೇನೆಯು ಪೂರ್ಣಗೊಳಿಸಿದೆ. ಮಧ್ಯ ದೆಹಲಿ ಮತ್ತು ಪೂರ್ವ ದೆಹಲಿ ನಡುವೆ ಪ್ರವಾಹದ ನೀರಿನಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಲಕ್ಷ್ಮಿನಗರಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದವು.
ಕೇಂದ್ರ ದೆಹಲಿ ಮತ್ತು ಪೂರ್ವ ದೆಹಲಿಗೆ ಸಂಪರ್ಕ ಕಲ್ಪಿಸುವ ವಿಕಾಸ್ ಮಾರ್ಗವನ್ನು ಮುಚ್ಚಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮಧ್ಯ ದೆಹಲಿ ಮತ್ತು ಪೂರ್ವ ದೆಹಲಿ ನಡುವೆ ಮೆಟ್ರೋ ಮೂಲಕ ಮಾತ್ರ ಹೋಗಲು ಸೌಲಭ್ಯವಿದೆ. ರಸ್ತೆಗಳನ್ನು ಮುಚ್ಚಿರುವುದರಿಂದ ದೆಹಲಿ ಬ್ಲೂ ಲೈನ್ ಮೆಟ್ರೋದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಮತ್ತೊಂದೆಡೆ ಯಮುನಾ ಪ್ರವಾಹ ರಾಜಕಾಲುವೆಗಳಿಂದ ರಸ್ತೆಗಳನ್ನು ತಲುಪುತ್ತಿದೆ.