ಹೊಸದಿಗಂತ ವರದಿ, ವಿಜಯನಗರ:
ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದು, ನಾನಾ ಚರ್ಚೆಗೆ ಗ್ರಾಸವಾಗಿದೆ.
ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಬ್ಯಾಂಕ್ ಗಳಲ್ಲೊಂದಾದ ನಗರದ ಬಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರು ಬ್ಯಾಂಕ್ ಸಿಇಒ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ರಾಜಕೀಯ ಪಡಸಾಲೆಯಲ್ಲಿ ನಾನಾ ಚರ್ಚೆಗಳು ಶುರುವಾಗಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ಸಿದ್ದಾರ್ಥ್ ಸಿಂಗ್ ಅವರು ಸೋಲು ಅನುಭವಿಸಿದ ಬಳಿಕ, ಸಭೆ ಸಮಾರಂಭಗಳಿಂದ ದೂರ ಉಳಿದಿದ್ದ ಅವರು, ದಿಢೀರ್ ಬಿಡಿಸಿಸಿ ಬ್ಯಾಂಕ್ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಕಳೆದ ಜೂ.27 ರಂದೇ ತಮ್ಮ ರಾಜೀನಾಮೆ ಪತ್ರವನ್ನು ಬ್ಯಾಂಕ್ ಸಿಇಒ ಅವರಿಗೆ ಆನಂದ್ ಸಿಂಗ್ ಅವರು ಸಲ್ಲಿಸಿದ್ದು, ಜು.1 ರಿಂದ ಅನ್ವಯಿಸಿ ಅಂಗೀಕರಿಸಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ. ರಾಜೀನಾಮೆಗೆ ನನ್ನ ವೈಯಕ್ತಿಕ ಕಾರಣ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.
ಚರ್ಚೆಗೆ ಗ್ರಾಸವಾದ ರಾಜೀನಾಮೆ
ವಿಜಯನಗರ ನೂತನ ಜಿಲ್ಲೆಯ ರೂವಾರಿ, ಅಭಿವೃದ್ಧಿ ಹರಿಕಾರ ಎನ್ನುವ ಕೀರ್ತಿಗೆ ಹೆಸರಾಗಿದ್ದ ಆನಂದ್ ಸಿಂಗ್ ಅವರು, ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಜೊತೆಗೆ ಬಿಡಿಸಿಸಿ ಬ್ಯಾಂಕ್ ನ ಶತಮಾನೋತ್ಸವ ಸಂಭ್ರಮವನ್ನು ಅತ್ಯಂತ ವೈಭವದಿಂದ ಆಚರಿಸಿ, ಸಹಕಾರಿ ಕ್ಷೇತ್ರದಲ್ಲೇ ಗಮನಸೆಳೆದಿದ್ದರು. ಮೂರು ಬಾರಿ ಬಿಜೆಪಿಯಿಂದ ಹಾಗೂ ಒಂದು ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ರಾಜ್ಯದ ಗಮನಸೆಳೆದಿದ್ದರು. ಆದರೇ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ಸಿದ್ದಾರ್ಥ್ ಸಿಂಗ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು, ಗೆಲ್ಲಿಸಲು ಸಾಕಷ್ಟು ಹೋರಾಟ ನಡೆಸಿದರೂ ಕ್ಷೇತ್ರದ ಜನ ಕೈಹಿಡಿದಿರಲಿಲ್ಲ. ಚುನಾವಣೆಯ ಪುತ್ರನ ಸೋಲಿನ ಬಳಿಕ ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೇ ದೂರ ಉಳಿದಿದ್ದರು. ದಿಢೀರ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ವೇಳೆ ಮಾಜಿ ಸಚಿವ ಆನಂದ್ ಸಿಂಗ್ ಅವರ ನಡೆ ನಿಗೂಢ ವಾಗಿದ್ದು, ರಾಜಕೀಯ ವಲಯದಲ್ಲಿ ನಾನಾ ಚೆರ್ಚೆಗಳು ಗರಿಗೆದರಿವೆ.