ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಬಾಳೇಗುಳಿ ಗೌರಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹೀಂದ್ರಾ ಥಾರ್ ವಾಹನ ಪಲ್ಟಿಯಾದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿದ್ದು ವಾಹನದಲ್ಲಿದ್ದ ವೈದ್ಯಾಧಿಕಾರಿಯೋರ್ವರ ಪುತ್ರ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.
ಅಂಕೋಲಾದಿಂದ ಕಾರವಾರ ಕಡೆ ಸಾಗುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಉರುಳಿ ಬಿದ್ದಿದ್ದು ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿ ನೆರೆ ಹಾವಳಿಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳಲು ಕಾರವಾರಕ್ಕೆ ತೆರಳುತ್ತಿದ್ದ ಸಿದ್ಧಾಪುರ ತಾಲೂಕಿನ ಲೋಕೋಪಯೋಗಿ ಇಂಜಿನಿಯರ್ ಒಬ್ಬರು ಮೃತ ಪಟ್ಟ ಘಟನೆ ನಡೆದಿತ್ತು.
ಅದೇ ಸ್ಥಳದಲ್ಲಿ ಅದೇ ರೀತಿಯಲ್ಲಿ ವಾಹನ ಪಲ್ಟಿಯಾಗಿದ್ದು ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಹಿಂದಿನ ದುರ್ಘಟನೆಯನ್ನು ನೆನಪಿಸಿಕೊಳ್ಳುವಂತಾಯಿತು.