ಈಶ್ವರಪ್ಪ ಪರ ತೀರ್ಪು ಕಾಂಗ್ರೆಸ್ ಗೆ ಮಾಡಿರುವ ಕಪಾಳಮೋಕ್ಷ: ಚನ್ನಬಸಪ್ಪ

ಹೊಸದಿಗಂತ ವರದಿ, ಶಿವಮೊಗ್ಗ:

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು 40 ಪರ್ಸೆಂಟ್ ಆರೋಪದಲ್ಲಿ ನಿರ್ದೋಷಿ ಎಂದು ತೀರ್ಪು ಬಂದಿರುವುದು ಕಾಂಗ್ರೆಸ್ ಗೆ ಮಾಡಿರುವ ಕಪಾಳಮೋಕ್ಷ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರತಿಕ್ರಿಯಿಸಿದರು.

ಈಶ್ವರಪ್ಪ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ ಏನೂ ಸಾಕ್ಷಿ ಇರಲಿಲ್ಲ. ಈಶ್ವರಪ್ಪ ಆನೆ ಇದ್ದಂಗೆ. ಅವರು ಧೈರ್ಯದಿಂದ ರಾಜಬೀದಿಯಲ್ಲಿ ನಡೆದರು. ಆನೆ ಹೋಗುವಾಗ ನಾಯಿ ಬೊಗಳಿದ ಸ್ಥಿತಿ ಕಾಂಗ್ರೆಸ್ ಪಕ್ಷದ್ದು ಎಂದು ಕುಟುಕಿದರು.

ಈಶ್ವರಪ್ಪ ಮೇಲೆ ಆರೋಪ ಬಂದಾಗ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿತ್ತು. ಈಗ ನ್ಯಾಯಾಲಯ ಅವರು ದೋಷಿ ಅಲ್ಲ ಎಂದು ಹೇಳಿದೆ. ಇದರಿಂದ ಎಲ್ಲರಿಗೂ ಆನಂದವಾಗಿದೆ. ಇದು ರಾಷ್ಟ್ರ ಭಕ್ತರಿಗೆ ಸಿಕ್ಕ ಜಯ ಎಂದು ಬಣ್ಣಿಸಿದರು.

ಈ ಘಟನೆ ಬಳಿಕ ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಈಶ್ವರಪ್ಪ ದೋಷಿ ಎನ್ನುವಂತೆ ಮಾತನಾಡಿದ್ದರು. ಉದ್ಧಟತನದ ಮಾತುಗಳನ್ನು ಕಾಂಗ್ರೆಸ್ ನಾಯಕರು ಆಡಿದ್ದರು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯಪಾಲರ ಬಾಯಲ್ಲಿ ಕಾಂಗ್ರೆಸ್ ಸುಳ್ಳು ಹೇಳಿಸಿತು. ಇದರಿಂದ ಕಾಂಗ್ರೆಸ್ ಉದ್ಧಾರ ಆಗಲ್ಲ. 40 ಪರ್ಸೆಂಟ್ ಆರೋಪವನ್ನು ಚುನಾವಣಾ ಕಾರ್ಯತಂತ್ರ ಮಾಡಿಕೊಂಡಿತ್ತು. ಏಳೆಂಟು ತಿಂಗಳು ಸುಳ್ಳಿನ ಸರಮಾಲೆಯನ್ನೇ ಹೆಣೆದರು. ಒಂದೇ ಒಂದು ಸಾಕ್ಷಿ ಅವರು ಕೊಡಲಿಲ್ಲ. ಈಗ ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಬಿಜೆಪಿ ಕಟ್ಟಿ ಹಾಕಲು ಕಾಂಗ್ರೆಸ್ ಕೆಂಪಣ್ಣ ಅವರನ್ನು ಬಳಸಿಕೊಂಡಿತು. ಬಿಜೆಪಿ ಸಾಧನೆ, ಬೆಳವಣಿಗೆ ಸಹಿಸದೇ ಈ ಟೂಲ್ ಕಿಟ್ ಸಿದ್ಧ ಮಾಡಿದ್ದರು. ವ್ಯವಸ್ಥಿತವಾಗಿ ಬಿಜೆಪಿ ಗೆ ಕಪ್ಪು ಚುಕ್ಕೆ ಆಗುವಂತೆ ಮಾಡಲು ನೋಡಿದರು. ಈಗ ಬಂದಿರುವ ನ್ಯಾಯಾಲಯದ ತೀರ್ಪು ಬಿಜೆಪಿ ವಿಜಯ ಎಂದು ಬಣ್ಣಿಸಿದರು.

ಇದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಚೇರಿ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಮುಖರಾದ ಹೃಷಿಕೇಶ್ ಪೈ, ಕೆ.ಈ.ಕಾಂತೇಶ್, ಇ.ವಿಶ್ವಾಸ್, ನಾಗರಾಜ್, ಜಗದೀಶ್, ಅಣ್ಣಪ್ಪ, ಇನ್ನಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!