ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025 ಅನ್ನು ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ನಡುವೆ ಶುಕ್ರವಾರ ವಿಧಾನಪರಿಷತ್ತಿನಲ್ಲಿಯೂ ಅಂಗೀಕರಿಸಲಾಯಿತು.
ವಿರೋಧ ಪಕ್ಷಗಳು ಇದನ್ನು ‘ಭಾಷಣ ಸ್ವಾತಂತ್ರ್ಯದ ಮೇಲೆ ನೇರ ದಾಳಿ, ರಾಜಕೀಯ ದ್ವೇಷಗಳಿಗೆ ಅಪಾಯಕಾರಿ ಅಸ್ತ್ರ ಎಂದು ಕರೆದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದವು.
ಇದರ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025 ಅನ್ನು ಮಂಡಿಸಿದರು. ಗುರುವಾರ ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಅಂಗೀಕರಿಸಲಾಗಿತ್ತು.
ಪ್ರಸ್ತಾವಿತ ಮಸೂದೆಯು ಪೊಲೀಸ್ ರಾಜ್ಯ “ಅಘೋಷಿತ ತುರ್ತುಸ್ಥಿತಿ”ಗೆ ಕಾರಣವಾಗುತ್ತದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದವು. ದ್ವೇಷದ ಅಪರಾಧಕ್ಕಾಗಿ 50,000 ರೂ.ಗಳ ದಂಡದೊಂದಿಗೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ವರ್ಷ ಜೈಲು ಶಿಕ್ಷೆಯನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಪುನರಾವರ್ತಿತ ಅಪರಾಧಗಳಿಗೆ, ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

