ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸರ್ಕಾರದಲ್ಲಿ ಏನು ಸರಿ ಇದೆ ಹೇಳಿ? ಚೂರಾದ್ರೂ ರೈತರ ಬಗ್ಗೆ ಕಾಳಜಿ ಇದೆಯಾ? ಇದ್ಯಾವ್ ಸೀಮೆ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಬಗ್ಗೆ ಇವರಿಗೆ ಮಾಹಿತಿ ಇದೆಯಾ? 42 ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿವೆ, ಬಜೆಟ್‌ನಲ್ಲಿ ರೈತರ ಆತ್ಮಹತ್ಯೆ ವಿಚಾರ ಕೂಡ ಎತ್ತಿಲ್ಲ. ಬರೀ ಗ್ಯಾರೆಂಟಿಗಳದ್ದೇ ದರ್ಬಾರ್ ನಡೆದಿದೆ. ಕೃಷಿ ಇಲಾಖೆಯನ್ನು ಕಡೆಗಣಿಸಿದ್ರೆ ರೈತರ ಕಥೆ ಏನು? ರೈತರ ಸ್ಥೈರ್ಯ ಹೆಚ್ಚು ಮಾಡೋ ಯಾವ ಯೋಜನೆ ಇದೆ ಹೇಳಿ? ಈ ಸರ್ಕಾರಕ್ಕೆ ಶಿಸ್ತಿಲ್ಲ, ಬರೀ ಲೂಟಿ ಮಾಡೋದೆ ಚಿಂತೆ ಎಂದಿದ್ದಾರೆ.
ಬಿಜೆಪಿ ಬಗ್ಗೆ ಮಾತನಾಡುತ್ತಾ, ದೂರುತ್ತಾ ಕೂತ ಕಾಂಗ್ರೆಸ್ ತಾನು ಮಾಡ್ತಿರೋದೇನು? ಗ್ಯಾರೆಂಟಿ ಹೆಸರಿನಲ್ಲಿ ಸಿಕ್ಕಾಪಟ್ಟೆ ಲೂಟಿ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರಕ್ಕೆ ಸ್ಪಂದಿಸೋ ಗುಣವಿರಬೇಕು, ರೈತ ಕುಟುಂಬಗಳಿಗೆ ಸರ್ಕಾರದಿಂದ ಒಬ್ಬರಾದ್ರೂ ಬಂದು ಸಮಾಧಾನ ಹೇಳಿದ್ದಾರಾ? ಇಲ್ಲ ಬರೀ ವರ್ಗಾವಣೆ ದಂಧೆ ಮಾಡುತ್ತಾ ಇದ್ದಾರೆ. ಇತಿಹಾಸದಲ್ಲೇ ವರ್ಗಾವಣೆಗೆ ಇಷ್ಟೆಲ್ಲಾ ಲೂಟಿ ಆಗಿದ್ದು ನೋಡಿಲ್ಲ ಎಂದು ಹೇಳಿದ್ದಾರೆ.