ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಪಾಂಡ್ಯ,ತಿಲಕ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 231 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಹಾರ್ದಿಕ್ ಪಾಂಡ್ಯ (63), ತಿಲಕ್ ವರ್ಮಾ (73) ಅರ್ಧಶತಕ ಸಿಡಿಸಿ ಅಬ್ಬರಿಸಿದರೆ, ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ (37) ಹಾಗೂ ಅಭಿಷೇಕ್ ಶರ್ಮಾ (34) ಕೂಡ ಸ್ಫೋಟಕ ಬ್ಯಾಟಿಂಗ್ ಭಾರತದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.
ಶುಭ್ಮನ್ ಗಿಲ್ ಸ್ಥಾನದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಅಭಿಷೇಕ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಪವರ್ ಪ್ಲೇನಲ್ಲಿ ಸ್ಫೋಟಕ ಆಟವಾಡಿ 5.4 ಓವರ್ಗಳಲ್ಲಿ 63 ರನ್ಗಳ ಜೊತೆಯಾಟ ನೀಡಿದರು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ಗಳಿಸಿ ಕಾರ್ಬಿನ್ ಬಾಷ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಸಂಜು ಸ್ಯಾಮ್ಸನ್ 2ನೇ ವಿಕೆಟ್ಗೆ ತಿಲಕ್ ವರ್ಮಾ ಜೊತೆಗೆ 34 ರನ್ಗಳ ಜೊತೆಯಾಟ ನಡೆಸಿದರು. ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ ಸಂಜು 22 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ 37 ರನ್ಗಳಿಸಿ ಜಾರ್ಜ್ ಲಿಂಡೆ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಇವರ ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮತ್ತೆ ವಿಫಲರಾದರು. ಸೂರ್ಯ ಕೇವಲ 7 ಎಸೆತಗಳಲ್ಲಿ 5 ರನ್ಗಳಿಸಿ ಕಾರ್ಬಿನ್ ಬಾಷ್ಗೆ ವಿಕೆಟ್ ಒಪ್ಪಿಸಿದರು.
ನಂತರ ಮೈದಾನಕ್ಕಿಳಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಪಾಂಡ್ಯ ಕೇವಲ 25 ಎಸೆತಗಳಲ್ಲಿ ತಲಾ 5 ಬೌಂಡರಿ, 5 ಸಿಕ್ಸರ್ಗಳ ಸಹಿತ 63 ರನ್ ಸಿಡಿಸಿದರು. ಪಾಂಡ್ಯ 4ನೇ ವಿಕೆಟ್ ಜೊತೆಯಾಟದಲ್ಲಿ 44 ಎಸೆತಗಳಲ್ಲಿ 105 ರನ್ ಸೇರಿಸಿದರು. ಪಾಂಡ್ಯರಂತೆಯೇ ಅಬ್ಬರಸಿದ ತಿಲಕ್ ವರ್ಮಾ ಕೂಡ 42 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 73 ರನ್ಗಳಿಸಿ ಇನ್ನಿಂಗ್ಸ್ ಅಂತ್ಯಕ್ಕೆ ಒಂದು ಎಸೆತವಿರುವಾಗ ರನ್ಔಟ್ ಆದರು. 3 ಎಸೆತಗಳನ್ನಾಡಿದ ಶಿವಂ ದುಬೆ ತಲಾ 1 ಬೌಂಡರಿ, ಸಿಕ್ಸರ್ ಸಹಿತ ಅಜೇಯ 10 ರನ್ಗಳಿಸಿದರು.

