ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವುದು ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನಿಯಂತ್ರಣವಾಗಿದ್ದರೂ , ಕೆಲವೊಮ್ಮೆ ಅಲ್ಲಲ್ಲಿ ಆಗುತ್ತಾ ಇರುತ್ತದೆ.
ಆದರೆ, ಜಾರ್ಖಂಡ್ ರಾಜ್ಯದಲ್ಲಿ ಜೆಪಿಎಸ್‌ಸಿ ಪರೀಕ್ಷೆಯಲ್ಲಿ 108ನೇ ಶ್ರೇಯಾಂಕ ಪಡೆದು ಒಂದು ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್ ಪಡೆದುಕೊಂಡಿದ್ದ ಮಿಥಾಲಿ ಶರ್ಮ, ಮೊದಲ ದಿನವೇ ತನ್ನ ಮೊದಲ ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೋ-ಆಪರೇಟಿವ್ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮರನ್ನು ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. 10 ಸಾವಿರ ಲಂಚ ಪಡೆಯುವಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಿಥಾಲಿ ಶರ್ಮ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಮೇಶ್ವರ ಪ್ರಸಾದ್ ಯಾದವ್ ಎನ್ನುವ ವ್ಯಕ್ತಿಯಿಂದ ದೂರು ದಾಖಲಾದ ಬೆನ್ನಲ್ಲಿಯೇ ಎಸಿಬಿ ಕಾರ್ಯಪ್ರವೃತ್ತವಾಗಿದ್ದರು.
ಯಾದವ್ ಅವರು ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದಾರೆ. ಕೊಡೆರ್ಮ ವ್ಯಾಪಾರ ಮಂಡಲವು ಬೀಜ ವಿತರಣೆಯ ನೋಡಲ್ ಏಜೆನ್ಸಿಯಾಗಿದೆ. ಜೂನ್ 16 ರಂದು ಮಿಥಾಲಿ ಶರ್ಮ ಅವರು ಕಚೇರಿಯ ಪರಿಶೀಲನೆಗೆ ಆಗಮಿಸಿದರು. ನನಗೆ ಗೊತ್ತಿಲ್ಲದ ಯಾವುದೋ ವಿಚಾರವನ್ನು ಹಿಡಿದುಕೊಂಡು ನನಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ಇದನ್ನು ಕೇಳುವ ಕುರಿತಾಗಿ ನಾನು ಅವರ ಕಚೇರಿಗೆ ಹೋಗಿದ್ದೆ ಈ ವೇಳೆ ಇಲಾಖಾ ಶಿಸ್ತು ಕ್ರಮದಿಂದ ಪಾರಾಗಬೇಕಿದ್ದಲ್ಲಿ 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಾಮ್‌ಪ್ರಸಾದ್ ಯಾದವ್ ತನ್ನ ದೂರಿನಲ್ಲಿ ತಿಳಿಸಿದ್ದರು.
ಆದರೆ, ತನ್ನದಲ್ಲದ ತಪ್ಪಿಗೆ ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲ ಎಂದು ನಿರ್ಧಾರ ಮಾಡಿದ್ದ ರಾಮ್‌ಪ್ರಸಾದ್ ಯಾದವ್, ಮುಂದಿನ ಕ್ರಮಕ್ಕಾಗಿ ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.
ಯಾದವ್ ಅವರ ದೂರಿನ ಆಧಾರದ ಮೇಲೆ, ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.