ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ರೈಲ್ವೆ ಅಂಡರ್‌ಪಾಸ್‌ನ ಒಂದು ಪಾರ್ಶ್ವದಲ್ಲಿ ದ್ವಿಪಥ ಸಂಪರ್ಕ ರಸ್ತೆ ನಿರ್ಮಿಸಲು ಭೂಸ್ವಾಧೀನದ ಅಗತ್ಯತೆಯಿದ್ದು, ಇದಕ್ಕೆ ಬೇಕಾದ ಕ್ರಮಗಳನ್ನು ನಿಯಮ ಪ್ರಕಾರ ಅನುಸರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.
ಮಂಗಳವಾರ ಅಂಡರ್‌ಪಾಸ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ತಹಸೀಲ್ದಾರ್ ಶಿವಶಂಕರ್, ಎಪಿಎಂಸಿ ಕಾರ್ಯದರ್ಶಿ ಎಂ.ಸಿ. ಪಡಗನೂರ, ಸಹಾಯಕ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತು ರೈಲ್ವೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು.
ಈಗಾಗಲೇ ೧೩ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ರೈಲ್ವೆ ಇಲಾಖೆ ಮತ್ತು ಹಿಂದಿನ ರಾಜ್ಯ ಸರಕಾರ ತಲಾ ಶೇ.೫೦ ಅನುದಾನ ನೀಡುವ ಮೂಲಕ ಯೋಜನೆ ಪೂರ್ಣಗೊಂಡಿದೆ. ಅಂಡರ್‌ಪಾಸ್‌ನ ಅಡಿಯಲ್ಲಿ ಏಕಪಥ ಸಂಪರ್ಕ ರಸ್ತೆಯನ್ನು ರೈಲ್ವೆ ನಿರ್ಮಿಸಿದ್ದು, ದ್ವಿಪಥಕ್ಕೆ ಬೇಕಾದ ಅವಕಾಶವನ್ನು ಕಲ್ಪಿಸಿದೆ. ಆದರೆ ಕಾಮಗಾರಿ ಪೂರ್ಣಗೊಳಿಸಲು ಸೂತ್ರಬೆಟ್ಟು ಭಾಗದಲ್ಲಿ ಭೂಸ್ವಾಧೀನ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಖಾಸಗಿ ಜಮೀನು ಆಗಿರುವ ಕಾರಣ ಅವರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಸರಕಾರ ತೃಪ್ತಿಕರ ದರ ನೀಡಿದಲ್ಲಿ ಜಾಗ ಮಾರಾಟ ಮಾಡಲು ಮಾಲೀಕರು ಒಪ್ಪಿದ್ದಾರೆ. ಆದರೆ ಅದಕ್ಕೆ ಬೇಕಾದ ಹಣಕಾಸು ಲಭ್ಯತೆಯ ಬಗ್ಗೆ ಅಸ್ಪಷ್ಟತೆ ಇರುವ ಹಿನ್ನೆಲೆಯಲ್ಲಿ ಸಂಸದರು ಮಾಹಿತಿ ಕೇಳಿದರು.
ಜಾಗದ ಮಾಲೀಕರನ್ನು ಕರೆದು ಮಾತುಕತೆ ನಡೆಸಿ ಜಾಗದ ಮೌಲ್ಯ ನಿರ್ಧಾರ ಮಾಡುವಂತೆ ಸಂಸದರು ಎ.ಸಿ. ಗಿರೀಶ್ ನಂದನ್ ಮತ್ತು ತಹಸೀಲ್ದಾರ್ ಶಿವಶಂಕರ್ ಅವರಿಗೆ ಸೂಚಿಸಿದರು. ನಗರಸಭೆಯಲ್ಲಿ ಜಮೀನು ಖರೀದಿಗೆ ಬೇಕಾದಷ್ಟು ನಿಧಿಯ ಲಭ್ಯತೆ ಇಲ್ಲ ಎಂದು ನಿಕಟಪೂರ್ವ ನಗರಸಭೆ ಅಧ್ಯಕ್ಷರಾದ ಜೀವಂಧರ ಜೈನ್ ಹೇಳಿದರು. ಎಪಿಎಂಸಿ ಕಡೆಯಿಂದ ಇಷ್ಟೊಂದು ಮೊತ್ತ ನೀಡುವುದಕ್ಕೆ ಅವಕಾಶವಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಹೇಳಿದರು. ಸಹಾಯಕ ಆಯುಕ್ತರಲ್ಲಿ ಹಣಕಾಸಿನ ಲಭ್ಯತೆ ಇದೆಯೇ ಎಂದು ಮಾಜಿ ಶಾಸಕರಾದ ಸಂಜೀವ ಮಠಂದೂರು ಪ್ರಶ್ನಿಸಿದರು. ನಮ್ಮಲ್ಲಿ ಅಂಥ ಯಾವುದೇ ನಿಧಿಯಿಲ್ಲ. ನಾವು ಜಾಗದ ಮೌಲ್ಯಮಾಪನ ಮಾಡಿ ಸ್ಥಳೀಯಾಡಳಿತವಾದ ನಗರಸಭೆಗೆ ಕೊಡಬಹುದು ಎಂದು ಎ.ಸಿ.ಯವರು ನುಡಿದರು.
ಮುಂದಿನ ಕೆಲವೇ ದಿನಗಳಲ್ಲಿ ಮಂಗಳೂರಿನಲ್ಲಿ ನೈಋತ್ಯ ರೈಲ್ವೆಯ ಅಧಿಕಾರಿಗಳ ಸಭೆ ಇದೆ. ಅದರಲ್ಲಿ ನಾನು ಈ ಬಗ್ಗೆ ಚರ್ಚಿಸುತ್ತೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆಲವೇ ಸಮಯದಲ್ಲಿ ಭೂಸ್ವಾಧೀನಕ್ಕೆ ಸಂಬoಧಪಟ್ಟ ಪ್ರಕ್ರಿಯೆ ನಡೆಸಲಾಗುವುದು. ವಿವೇಕಾನಂದ ಕಾಲೇಜಿಗೆ ತೆರಳುವ ನೆರಹೂನಗರ ರಸ್ತೆಯಲ್ಲಿ ರೈಲ್ವೆ ಓವರ್‌ಬ್ರಿಜ್ ಕಾಮಗಾರಿ ೫ ಕೋಟಿಯಲ್ಲಿ ನಡೆಯಲಿದೆ. ಮಳೆಗಾಲವಾದ ಕಾರಣ ಕಾಮಗಾರಿ ಆರಂಭ ವಿಳಂಬವಾಗಿದೆ ಎಂದರು.
ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ, ಪುತ್ತೂರು ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವಾ, ಮಾಜಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖಂಡರಾದ ರಾಜೇಶ್ ಬನ್ನೂರು, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಹರೀಶ್ ಬಿಜತ್ರೆ, ಜಯಂತಿ ನಾಯಕ್, ಆಶಾ ತಿಮ್ಮಪ್ಪ ಗೌಡ, ನಿತೀಶ್ ಕುಮಾರ್ ಶಾಂತಿವನ, ರಾಮದಾಸ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.