ಸಕಾಲದಲ್ಲಿ ಲಭ್ಯವಾಗದ ವೆಂಟಿಲೇಟರ್ ಆಂಬ್ಯುಲೆನ್ಸ್: ಮೂರು ತಿಂಗಳ ಮಗು ಸಾವು

ಹೊಸ ದಿಗಂತ ವರದಿ, ಕಾರವಾರ:

ವೆಂಟಿಲೇಟರ್ ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ಲಭ್ಯತೆ ಇಲ್ಲದೇ ಮೂರು ತಿಂಗಳ ಮಗುವೊಂದು ಮೃತ ಪಟ್ಟ ಘಟನೆ ಕಾರವಾರ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು ಜಿಲ್ಲಾ ಮಟ್ಟದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತುರ್ತು ಅಗತ್ಯ ಸೌಲಭ್ಯಗಳು ಇಲ್ಲದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮಗುವಿನ ಪೋಷಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ದ್ವಾರದಲ್ಲಿ ಮಗುವಿನ ಮೃತ ಶರೀರದೊಂದಿಗೆ ಕೆಲಕಾಲ ಪ್ರತಿಭಟನೆ ನಡೆಸಿದರು.

ತಾಲೂಕಿನ ಕಿನ್ನರ ಗ್ರಾಮದ ರಾಜೇಶ ಎನ್ನುವವರ ಮೂರು ತಿಂಗಳ ಗಂಡು ಮಗುವಿಗೆ ಕಫದಿಂದ ಆರೋಗ್ಯ ಸಮಸ್ಯೆ ಕಂಡು ಬಂದ ಕಾರಣ ಮೊದಲು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ದಾಖಲಿಸಲಾಗಿತ್ತು.

ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಮಗು ಸ್ಪಂದಿಸದೇ ಇರುವುದರಿಂದ ಉಡುಪಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು.

ಮಗುವನ್ನು ಉಡುಪಿಗೆ ಕೊಂಡೊಯ್ಯಲು ವೆಂಟಿಲೇಟರ್ ಸೌಲಭ್ಯ ಇರುವ ಆಂಬ್ಯುಲೆನ್ಸ್ ಅಗತ್ಯವಿದ್ದು ಕಾರವಾರ ಆಸ್ಪತ್ರೆಯಲ್ಲಿ ಚಿಕ್ಕ ಮಗುವನ್ನು ಸಾಗಿಸುವ ವೆಂಟಿಲೇಟರ್ ಸೌಲಭ್ಯದ ಆಂಬ್ಯುಲೆನ್ಸ್ ಇಲ್ಲದ ಕಾರಣ ಪೋಷಕರು ಉಡುಪಿಯಿಂದ ಆಂಬ್ಯುಲೆನ್ಸ್ ಕರೆಸುವಂತಾಗಿದ್ದು ಆಂಬ್ಯುಲೆನ್ಸ್ ಬಂದು ತಲುಪುವ ಪೂರ್ವದಲ್ಲೇ ಮಗು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಮದುವೆಯಾಗಿ ಐದು ವರ್ಷಗಳ ನಂತರ ಜನಿಸಿದ ಗಂಡು ಮಗು ಮೃತ ಪಟ್ಟ ಘಟನೆಯಿಂದ ಪೋಷಕರು ಆಘಾತಗೊಂಡಿದ್ದು ಮಗುವಿನ ಸಂಬಂಧಿಗಳು ಆಸ್ಪತ್ರೆ ದ್ವಾರದಲ್ಲಿ ಪ್ರತಿಭಟನೆ ನಡೆಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!