ಹೊಸದಿಗಂತ ವರದಿ, ಅಂಕೋಲಾ:
ಶಿಕ್ಷಣವೆಂದರೆ ಪಠ್ಯಕ್ಕೆ ಮಾತ್ರ ಸೀಮಿತವಾಗಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿ ವಾಸ್ತವಿಕತೆ ಮರೆಯುತ್ತಿರುವ ಇಂದಿನ ದಿನಗಳಲ್ಲಿ ಗದ್ದೆಯಲ್ಲಿ ಇಳಿದು ಕೃಷಿಯ ಕುರಿತು ಅನುಭವ ಪಡೆಯುವ ಅಪರೂಪದ ಕ್ಷಣಗಳು ತಾಲೂಕಿನ ಶಾಲೆಯೊಂದರ ವಿದ್ಯಾರ್ಥಿಗಳ ಪಾಲಿಗೆ ಒದಗಿ ಬಂತು.
ತಾಲೂಕಿನ ತೆಂಕಣಕೇರಿ ಗ್ರಾಮದ ಆದರ್ಶ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡುವುದನ್ನು ಹೇಳಿಕೊಡುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು.
ನಾಲ್ಕು ಗೋಡೆಗಳ ನಡುವೆ ಪಠ್ಯದಲ್ಲಿರುವ ವಿಷಯವನ್ನು ಹೇಳಿಕೊಡುವುದರೊಂದಿಗೆ ಪ್ರಾಯೋಗಿಕವಾಗಿ ವಿಷಯದ ಕುರಿತು ಮಾಹಿತಿ ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬಹುದು ಎಂಬ ಆಶಯದೊಂದಿಗೆ ಮಕ್ಕಳನ್ನು ಭತ್ತದ ಗದ್ದೆಗೆ ಕರೆದುಕೊಂಡು ಹೋಗಿ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ರೈತರು ಹೊಲದಲ್ಲಿ ಕೆಲಸ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ ವಿದ್ಯಾರ್ಥಿಗಳು ಕೃಷಿಯ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರಲ್ಲದೇ ತಾವೂ ಸಹ ಉತ್ಸಾಹದಿಂದ ಗದ್ದೆಗಿಳಿದು ನಾಟಿ ಮಾಡುವ ಮೂಲಕ ಗಮನ ಸೆಳೆದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷಿಕ ರಾಜೇಶ ಮಿತ್ರಾ ನಾಯ್ಕ ಸಹ ಮಕ್ಕಳೊಂದಿಗೆ ನಾಟಿ ಕಾರ್ಯಕ್ಕೆ ಇಳಿದು ಪ್ರೋತ್ಸಾಹಿಸಿದರು.
ಮುಖ್ಯಾಧ್ಯಾಪಕ ನಿತ್ಯಾನಂದ ನಾಯ್ಕ, ಶಿಕ್ಷಕಿ ಭಾರತಿ ನಾಯ್ಕ, ದೇವಯಾನಿ ನಾಯಕ, ರಜನಿ ನಾಯ್ಕ,ಮಧುಕೇಶ್ವರ ನಾಯ್ಕ ಉಪಸ್ಥಿತರಿದ್ದರು.