ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಹುಟ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ. ತ್ಯಾಗರಾಜ ನಗರ ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿ ಭೀತಿ ಮೂಡಿಸಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಗಳು ಹೊರಬಿದ್ದ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವನ್ನು ಕಾಲಿನಿಂದ ಒದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆ ಏಟಿನ ತೀವ್ರತೆಗೆ ಮಗು ದೂರಕ್ಕೆ ಉರುಳಿ ಬಿದ್ದಿದ್ದು, ಹಣೆ, ಕಣ್ಣು ಹಾಗೂ ಕೈಕಾಲುಗಳಲ್ಲಿ ಗಾಯಗಳಾಗಿ ರಕ್ತಸ್ರಾವ ಉಂಟಾಗಿತ್ತು. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯಿಂದ ಇದಕ್ಕೂ ಮುನ್ನ ನಡೆದಿರುವ ಮತ್ತಷ್ಟು ಕ್ರೌರ್ಯ ಘಟನೆಗಳು ಹೊರಬಂದಿವೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ಕೂದಲು ಹಿಡಿದು ಎಳೆದಾಡುವುದು ಸೇರಿದಂತೆ, ಕೇವಲ ಒಂದು ವಾರದೊಳಗೆ ನಾಲ್ಕು ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ತಿಳಿದುಬಂದಿದೆ. ಆಶ್ಚರ್ಯಕರ ಸಂಗತಿ ಎಂದರೆ, ಈ ಎಲ್ಲ ಘಟನೆಗಳ ಕುರಿತು ಪೋಷಕರು ಇದುವರೆಗೂ ಅಧಿಕೃತ ದೂರು ನೀಡಿರಲಿಲ್ಲ.
ಒಂದು ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ಆರೋಪಿ ಸ್ಟೇಷನ್ ಬೇಲ್ ಪಡೆದು ಚೆನೈಗೆ ತೆರಳಿದ್ದಾನೆ. ಇದೀಗ ಮಕ್ಕಳ ಮೇಲಿನ ಕ್ರೌರ್ಯ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

