ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಅಕ್ಕಿಯ ಕೊರತೆಯಿಂದ ಆತಂಕಗೊಂಡಿರುವ ಅನಿವಾಸಿ ಭಾರತೀಯರು ಅಕ್ಕಿಗಾಗಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಸೂಪರ್ ಮಾರ್ಕೆಟ್ಗಳ ಬಳಿ ಅಕ್ಕಿ ಖರೀದಿಸಲು ಕ್ಯೂ ಕಟ್ಟಿದ್ದಾರೆ. ಭಾರತದಿಂದ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಭಾರತ ನಿಷೇಧ ಹೇರಿರುವುದರಿಂದ ಅಮೆರಿಕದಲ್ಲಿ ಅಕ್ಕಿಯ ಕೊರತೆ ಎದುರಾಗಲಿದೆ ಎಂಬ ಆತಂಕದಿಂದ ಅನಿವಾಸಿ ಭಾರತೀಯರೆಲ್ಲ ಸೂಪರ್ ಮಾರ್ಕೆಟ್ ಗಳ ಮೊರೆ ಹೋಗಿದ್ದಾರೆ.
ಇದರಿಂದ ಮಾರುಕಟ್ಟೆಯಲ್ಲಿರುವ ಅಕ್ಕಿಯ ದಾಸ್ತಾನು ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿದ್ದು, ಅನಿವಾಸಿ ಭಾರತೀಯರು ಅಕ್ಕಿಗಾಗಿ ಅಂಗಡಿಗಳಿಗೆ ತೆರಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸೋನಾ ಮಸ್ಸೂರಿ ಅಕ್ಕಿಗಾಗಿ ಸರತಿ ಸಾಲಿನಲ್ಲಿ ನಿಂತಿರುವುದು, ಅಂಗಡಿಗಳಲ್ಲಿ ಅಕ್ಕಿ ಪ್ಯಾಕೆಟ್ಗಳನ್ನು ನಾ ಮುಂದು ತಾಮುಂದು ಎಂದು ಕೊಳ್ಳುತ್ತಿರುವ ದೃಶ್ಯಗಳು ಕಂಡುಬಂತು. ಜನಜಂಗುಳಿ ಹೆಚ್ಚಾದ ಕಾರಣ ಅನೇಕ ಸೂಪರ್ಮಾರ್ಕೆಟ್ಗಳಲ್ಲಿ ನೋ ಸ್ಟಾಕ್ ಬೋರ್ಡ್ಗಳು ಇಟ್ಟಿದ್ದಾರೆ.
ಕೆಲಸಕ್ಕೆ ರಜೆ ಹಾಕಿ ಸೂಪರ್ ಮಾರ್ಕೆಟ್ಗಳಿಗೆ ಓಡಿ ಅಕ್ಕಿ ಪ್ಯಾಕೆಟ್ಗಳನ್ನು ಖರೀದಿಸುವ ಮಟ್ಟಕ್ಕೆ ಕೊರೆತ ಎದುರಾಗಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಅಮೆರಿಕದಲ್ಲಿ ಈಗಾಗಲೇ ಹಲವು ಬಗೆಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಕ್ರಮದಲ್ಲಿ ಅಕ್ಕಿ ಕೊರತೆ ಸುದ್ದಿಯಿಂದಾಗಿ ಎಲ್ಲ ಸೂಪರ್ ಮಾರ್ಕೆಟ್ ಗತ್ತ ಮುಗಿಬಿದ್ದಿದ್ದಾರೆ.
ಭಾರತವು ಬಾಸ್ಮತಿ ಅಲ್ಲದ ಅಕ್ಕಿಯನ್ನು ನಿಷೇಧಿಸುವ ಸುದ್ದಿಯನ್ನು ನೇರ ಪ್ರಸಾರ ಮಾಡಿದಾಗಿನಿಂದ ಎನ್ಆರ್ಐಗಳಿಗೆ ಭೀತಿ ಶುರುವಾಗಿದೆ. ಈ ಸುದ್ದಿ ಬಂದಾಗಿನಿಂದ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಖರೀದಿಸಲು ಮುಗಿಬಿದ್ದಿದ್ದಾರೆ ಎಂದು ಅಲ್ಲಿನ ಮಾರುಕಟ್ಟೆ ವ್ಯವಸ್ಥಾಪಕರು ತಿಳಿಸಿದ್ದಾರೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆಯೂ ಗಗನಕ್ಕೇರಿದೆ.
ಅನಿವಾಸಿ ಭಾರತೀಯರಿಗೆ ಅಕ್ಕಿ ಕೊರತೆಯ ಬಗ್ಗೆ ಆತಂಕ ಬೇಡ ಎಂದು ಹೇಳಿದ್ದರೂ, ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಈ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.