ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಇದರಜೊತೆಗೆ ಘಟ್ಟ ಪ್ರದೇಶದಲ್ಲಿ ಎಬಿಡದೆ ಸುರಿಯುತ್ತಿರುವ ಆಷಾಢದ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪುಣ್ಯ ನದಿ ಕುಮಾರಧಾರ ಮೈದುಂಬಿ ಹರಿಯುತ್ತಿದೆ.
ಬಾರೀ ಮಳೆಗೆ ಕುಮಾರಧಾರದ ಉಪನದಿ ದರ್ಪಣತೀರ್ಥದ ಸೇತುವೆಯು ಮುಳುಗಡೆಯಾಗಿದೆ . ಇದರಿಂದಾಗಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಚಾರ ಸ್ಥಗಿತಗೊಂಡಿತು.
ಕುಮಾರಧಾರ ನದಿಯ ಉಪನದಿಯಾದ ದರ್ಪಣತೀರ್ಥ ನದಿಗೆ ಕುಮಾರಧಾರ ಸ್ನಾನಘಟ್ಟದ ಬಳಿ ನಿರ್ಮಿತವಾಗಿದ್ದ ಎತ್ತರವಾದ ದರ್ಪಣತೀರ್ಥ ಸೇತುವೆಯು ಬಾರೀ ಮಳೆಗೆ ಮುಳುಗಡೆಗೊಂಡಿತ್ತು.ಸೇತುವೆಯಿಂದ ಮುಂದುಗಡೆ ಸುಮಾರು ೨೦೦ ಮೀಟರ್ ರಸ್ತೆಯು ನದಿ ನೀರಿನಿಂದ ಮುಳುಗಡೆಗೊಂಡಿತ್ತು.ಇದರಿಂದಾಗಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಅಲ್ಲದೆ ಇದರಿಂದಾಗಿ ಸ್ಥಳೀಯವಾದ ದೋಣಿಮಕ್ಕಿ, ಪರ್ವತಮುಖಿ,ಮೇಲ್ನಾಡು ಪ್ರದೇಶಕ್ಕೆ ತೆರಳುವ ರಸ್ತೆಯು ಮುಳುಗಡೆಯಾಗಿತ್ತು.
ದರ್ಪಣತೀರ್ಥ ಸೇತುವೆ ಮುಳುಗಡೆಗೊಂಡು ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ಅಂತರ್ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಈ ರಸ್ತೆಯು ಜಲಾವೃತ್ತಗೊಂಡಿದ್ದುದರಿಂದ ಬಸ್ ಸಂಚಾರ ಸ್ಥಗಿತಗೊಂಡಿತು.