ಲೈಂಗಿಕ ಕ್ರಿಯೆ ಸಮಯದಲ್ಲಿ ಭಗವದ್ಗೀತೆಯ ಪಠಣ: ವಿವಾದದ ಸುತ್ತ ‘ಆಪನ್​ಹೈಮರ್​’ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ಆಪನ್​ಹೈಮರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಮರ್ಶಕರು ಕೂಡ ಹಾಲಿವುಡ್​ನ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆದ್ರೆ ಈ ಖುಷಿ ನಡುವೆ ಸಿನಿಮಾದಲ್ಲಿನ ಒಂದು ದೃಶ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಹೌದು, ಸಿನಿಮಾದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಸಿನಿಮಾದಲ್ಲಿದೆ. ಇದಕ್ಕೆ ಭಾರತದಲ್ಲಿ ಆಕ್ಷೇಪ ಎದುರಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್​ ಮಹುರ್ಕರ್​ ತಕರಾರು ತೆಗೆದಿದ್ದು, ಸೋಶಿಯಲ್​ ಮೀಡಿಯಾ ಮೂಲಕ ಅವರು ‘ಆಪನ್​ಹೈಮರ್​’ ಚಿತ್ರತಂಡವನ್ನು ಪ್ರಶ್ನಿಸಿದ್ದಾರೆ.

ಅಣುಬಾಂಬ್​ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ಕುರಿತು ‘ಆಪನ್​ಹೈಮರ್​’ ಸಿನಿಮಾ . ಆಪನ್​ಹೈಮರ್​ ಪಾತ್ರವನ್ನು ಕಿಲಿಯನ್​ ಮರ್ಫಿ ಮಾಡಿದ್ದಾರೆ. ರಿಯಲ್​ ಲೈಫ್​ನಲ್ಲೂ ಆಪನ್​ಹೈಮರ್​ ಅವರಿಗೆ ಹಿಂದು ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ ಆಪನ್​ಹೈಮರ್​ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಪೈಕಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ‘ಇದು ಏನು’ ಅಂತ ಆಕೆ ಪ್ರಶ್ನಿಸುತ್ತಾಳೆ. ‘ಇದು ಭಗವದ್ಗೀತೆ’ ಎಂದು ಆಪನ್​ಹೈಮರ್​ ಹೇಳುತ್ತಾರೆ ಮತ್ತು ಅದರಲ್ಲಿನ ಒಂದೆರಡು ಸಾಲುಗಳನ್ನು ವಿವರಿಸುತ್ತಾರೆ. ಈ ದೃಶ್ಯ ಈಗ ಭಾರತೀಯರನ್ನು ಕೆರಳಿಸಿದೆ.

ಇಂಥ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್​ ಮಂಡಳಿಯವರು ಹೇಗೆ ಅನುಮತಿ ನೀಡಿದರು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಇದು ಹಿಂದು ಧರ್ಮದ ಮೇಲೆ ಮಾಡಲಾಗಿರುವ ದಾಳಿ ಎನ್ನುವ ಟೀಕೆ ಕೂಡ ವ್ಯಕ್ತವಾಗುತ್ತಿದೆ.

‘ಸೇವ್​ ಕಲ್ಚರ್​ ಸೇವ್​ ಇಂಡಿಯಾ ಪ್ರತಿಷ್ಠಾನ’ದ ವತಿಯಿಂದ ಉದಯ್​ ಮಹುರ್ಕರ್​ ‘ಆಪನ್​ಹೈಮರ್​’ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ಗೆ ಪತ್ರ ಬರೆದಿದ್ದಾರೆ. ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಕ್ರಿಸ್ಟೋಫರ್​ ನೋಲನ್​ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here