ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂಸಾಚಾರ ಪೀಡಿತ ಮಣಿಪುರದ ಕ್ರೀಡಾಪಟುಗಳನ್ನು ತಮ್ಮ ರಾಜ್ಯದಲ್ಲಿ ತರಬೇತಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾನುವಾರ ಆಹ್ವಾನಿಸಿದ್ದಾರೆ.
ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಈ ಸಂಬಂಧ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಖೇಲೋ ಇಂಡಿಯಾ ಮತ್ತು ಏಷ್ಯನ್ ಗೇಮ್ಸ್‌ನಂತಹ ಕ್ರೀಡಾಕೂಟಗಳಿಗೆ ತರಬೇತಿ ನೀಡಲು ಮಣಿಪುರದ ಪರಿಸ್ಥಿತಿ ಕ್ರೀಡಾಪಟುಗಳಿಗೆ ಅನುಕೂಲಕರವಾಗಿಲ್ಲ ಎಂದು ಸಿಎಂ ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಮಣಿಪುರದ ಕ್ರೀಡಾಪಟುಗಳಿಗೆ ತಮಿಳುನಾಡಿನಲ್ಲಿ ವ್ಯವಸ್ಥೆ ಮಾಡುವಂತೆ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಮಣಿಪುರದ ಕ್ರೀಡಾಪಟುಗಳಿಗೆ ಕ್ರೀಡಾ ಇಲಾಖೆಯ ಪರವಾಗಿ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವುದಾಗಿ ಉದಯನಿಧಿ ಭರವಸೆ ನೀಡಿದ್ದಾರೆ.
2024ರ ಆವೃತ್ತಿಯ ಖೇಲೋ ಇಂಡಿಯಾ ಗೇಮ್ಸ್‌ಗೆ ತಮಿಳುನಾಡು ಆತಿಥ್ಯ ವಹಿಸಲಿದೆ. ಮಣಿಪುರವು ಚಾಂಪಿಯನ್‌ಗಳನ್ನು, ವಿಶೇಷವಾಗಿ ಮಹಿಳಾ ಚಾಂಪಿಯನ್‌ಗಳನ್ನು ದೇಶಕ್ಕೆ ನೀಡುವಲ್ಲಿ ಹೆಸರುವಾಸಿಯಾಗಿದೆ. ತಮಿಳುನಾಡು ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಕಾಳಜಿ ಮತ್ತು ದುಃಖದಿಂದ ನೋಡುತ್ತಿದೆ ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಮಣಿಪುರದಿಂದ ತಮಿಳುನಾಡಿನಲ್ಲಿ ಪ್ರಯೋಜನವನ್ನು ಪಡೆಯಲು ಇಚ್ಛಿಸುವವರು +91-8925903047 ಅನ್ನು ಸಂಪರ್ಕಿಸಬಹುದು ಅಥವಾ ಐಡಿ ಪುರಾವೆ ಮತ್ತು ತರಬೇತಿ ಅಗತ್ಯತೆಗಳು ಸೇರಿದಂತೆ ವಿವರಗಳನ್ನು [email protected] ಗೆ ಇಮೇಲ್ ಮಾಡಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.