ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿನಾಡು ಚಿಕ್ಕಮಗಳೂರಿನಲ್ಲಿ(Chikmagalur Rain) ಭಾರೀ ಮಳೆಯಾಗುತ್ತಿದ್ದು, ಮುಳ್ಳಯ್ಯನಗಿರಿ(Mullayanagiri) ಮಾರ್ಗದಲ್ಲಿ ಭಾರೀ ಗುಡ್ಡ ಕುಸಿದಿದೆ. ಹೀಗಾಗಿ ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಮುಳ್ಳಯ್ಯನಗಿರಿ ರಸ್ತೆ ಮಾರ್ಗದಲ್ಲಿ ಹತ್ತಕ್ಕೂ ಅಧಿಕ ಕಡೆ ಗುಡ್ಡ ಕುಸಿದಿದ್ದು ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು ಬೀಳುತ್ತಲೇ ಇದೆ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಬಂದ್ ಮಾಡಲಾಗಿದೆ.ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.
ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ, ಎನ್ಆರ್ ಪುರ ತಾಲೂಕಿನಾದ್ಯಂತ ಆತಂಕ ಮೂಡಿಸಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಆರ್ಭಟಿಸುತ್ತಿವೆ. ಶೃಂಗೇರಿ ಶಾರದಾಂಬೆ ದೇವಾಲಯದ ಬಳಿ ತುಂಗಾ ನದಿ ನೆರೆ ಆತಂಕವನ್ನ ಸೃಷ್ಟಿ ಮಾಡಿದ್ದು ಕಪ್ಪೆ ಶಂಕರ ದೇವಾಲಯ ಸೇರಿದಂತೆ ಗುರು ನಿವಾಸಕ್ಕೆ ತೆರಳುವ ಮಾರ್ಗದಲ್ಲಿರುವ ತೆಂಗಿನ ತೋಟ ಸಂಪೂರ್ಣ ಜಲಾವೃತಗೊಂಡಿದೆ. ಸಂಧ್ಯಾ ವಂದನ ಮಂಟಪ ಮುಳುಗಡೆಯಾಗಿದೆ.
ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಚಿಕ್ಕಮಗಳೂರಿನಿಂದ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಗುಡ್ಡ ಕುಸಿದಿದ್ದು ರಸ್ತೆ ಬಂದ್ ಆಗುವ ಆತಂಕ ಎದುರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡ ಕುಸಿಯುತ್ತಿದ್ದು ಸಾವಿರಾರು ಪ್ರವಾಸಿಗರು ಅದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.