ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದ ಅನುಚಿತ ವರ್ತನೆ ತೋರಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ನಿಷೇಧದ ಭೀತಿ ಎದುರಾಗಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಂಪೈರ್ ನೀಡಿದ ಔಟ್ ತೀರ್ಪಿಗೆ ಮೈದಾನದಲ್ಲಿ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು , ಅಂಪೈರ್‌ಗಳನ್ನು ಬಹಿರಂಗವಾಗಿ ಟೀಕಿಸಿದ್ದರು.
ಹೀಗಾಗಿ ಭಾರತದ ನಾಯಕಿ ಹರ್ಮನ್‌ಪ್ರೀತ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 2 ಪಂದ್ಯ ನಿಷೇಧ ಹೇರುವ ಸಾಧ್ಯತೆ ಇದೆ.
ಇನ್ನು ಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆಯಾದರೂ, ಮೂಲಗಳ ಪ್ರಕಾರ ಹರ್ಮನ್‌ಪ್ರೀತ್ ಕೌರ್‌ಗೆ ಪಂದ್ಯದ ಸಂಭಾವನೆಯ 50% ದಂಡದ ಜತೆಗೆ 4 ಋಣಾತ್ಮಕ ಅಂಕಗಳಿಗೆ ಗುರಿಯಾಗಲಿದ್ದಾರೆ.ಐಸಿಸಿ ನಿಯಮದ ಪ್ರಕಾರ 24 ತಿಂಗಳ ಅವಧಿಯಲ್ಲಿ 4ರಿಂದ 7 ಋಣಾತ್ಮಕ ಅಂಕ ಪಡೆದರೆ, ಅದು 2 ನಿಷೇಧ ಅಂಕಗಳಾಗಿ ಪರಿಗಣಿಸಲ್ಪಡುತ್ತದೆ.
2 ನಿಷೇಧ ಅಂಕಕ್ಕೆ ಗುರಿಯಾದರೆ ಆ ಆಟಗಾರ/ಆಟಗಾರ್ತಿಯನ್ನು 1 ಟೆಸ್ಟ್ ಅಥವಾ 2 ಏಕದಿನ ಅಥವಾ 2 ಟಿ20 ಪಂದ್ಯಗಳಿಗೆ(ಯಾವುದು ಮೊದಲೋ ಅದು) ನಿಷೇಧಿಸಲಾಗುತ್ತದೆ.
ಒಂದು ವೇಳೆ ಈ ರೀತಿಯಾದರೆ ಮುಂಬರುವ ಏಷ್ಯನ್ ಗೇಮ್ಸ್ ವೇಳೆ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.