ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಸ್ಫೋಟದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯನ್ನು ಅದ್ನಾನ್ ಅಫ್ರಿದಿ ಎಂದು ಗುರುತಿಸಲಾಗಿದೆ.
ಖೈಬರ್ ಜಿಲ್ಲೆಯ ಅಲಿ ಮಸೀದಿ ಪ್ರದೇಶದಲ್ಲಿನ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇಬ್ಬರು ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಮೇರೆಗೆ ಖೈಬರ್ ಜಿಲ್ಲಾ ಪೊಲೀಸರು ನಿರ್ಮಾಣ ಹಂತದಲ್ಲಿರುವ ಮಸೀದಿಯ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಭಯೋತ್ಪಾದಕನನ್ನು ಬಂಧಿಸಲು ಪ್ರಯತ್ನಿಸಿದಾಗ, ಒಬ್ಬ ಭಯೋತ್ಪಾದಕ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರಿಂದ ದುರಂತಕ್ಕೆ ಕಾರಣವಾಗಿದೆ. ಇನ್ನೊಬ್ಬ ಭಯೋತ್ಪಾದಕ ಬಾಂಬ್ ದಾಳಿಯ ಸ್ಥಳದಿಂದ ಓಡಿಹೋದನು.
ಪರಾರಿಯಾಗಿದ್ದ ಉಗ್ರನನ್ನು ಭದ್ರತಾ ಪಡೆಗಳು ಬಂಧಿಸಿವೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವರ್ಷ ಈ ಪ್ರಾಂತ್ಯದಲ್ಲಿ 15 ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ 665 ಭಯೋತ್ಪಾದಕ ದಾಳಿಗಳು ನಡೆದಿವೆ.