ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಜ್ಯೋತಿಷಿಯನ್ನು ನಂಬಿ ದೊಡ್ಡ ಅನಾಹುತವೇ ಸಂಭವಿಸಿದೆ. ಯಲಹಂಕದಲ್ಲಿ ದಂಪತಿಯೊಬ್ಬರು ಮಗಳು ಅಳಿಯನ ನಡುವೆ ಸದಾ ಜಗಳ ಆಗುವುದನ್ನು ಕಂಡು ಜ್ಯೋತಿಷಿ ಮೊರೆ ಹೋಗಿದ್ದಾರೆ. ಆತ ಮನೆಗೆ ಬಂದು ಎಲ್ಲವನ್ನೂ ಸರಿ ಮಾಡ್ತೀನಿ, ನೀವು ಅಮವಾಸ್ಯೆ ದಿನಗಳಂದು ಮನೆಯಲ್ಲಿ ಇರಬಾರದು, ವಿಶೇಷ ಪೂಜೆ ಮಾಡಿಸಿ ಎಂದಿದ್ದಾರೆ.
ಇದನ್ನು ನಂಬಿ ಕುಟುಂಬದ ಎಲ್ಲರೂ ದೇಗುಲಕ್ಕೆ ತೆರಳಿದ್ದಾರೆ. ಆ ವೇಳೆ ಜೋತಿಷಿ ಮನೆಗೆ ಬಂದು ಬೀರು ಬೀಗ ಒಡೆದು ಅಲ್ಲಿ ನಿಂಬೆಹಣ್ಣು ಇಟ್ಟಿದ್ದಾರೆ. ನಂತರ ಜೋತಿಷಿಯೇ ಕರೆ ಮಾಡಿ ನಿಮ್ಮ ಬೀರು ನೋಡಿ ಸಮಸ್ಯೆಯಿದೆ ಎಂದಿದ್ದಾರೆ. ಬೀರುನಲ್ಲಿ ನಿಂಬೆಹಣ್ಣು ನೋಡಿ ಕುಟುಂಬದವರು ಹೌಹಾರಿದ್ದಾರೆ. ತಕ್ಷಣವೇ ಜ್ಯೋತಿಷಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇದು ನಿಮ್ಮ ಅಳಿಯ ಹಾಗೂ ಬೀಗರ ಮನೆಯವರ ಕೈವಾಡ, ಅವರಿಂದ ಹಣ ವಾಪಾಸ್ ತರಿಸೋಣ ಅದಕ್ಕೊಂದು ಪೂಜೆ ಮಾಡಿಸಿ ಎಂದು ಹಣ ಕಿತ್ತಿದ್ದಾನೆ. ನಂತರ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.