ತ್ರಿವೇಣಿ ಗಂಗಾಧರಪ್ಪ
ಮಳೆಗೂ ಕೂಡ ಮನುಷ್ಯರಂತೆಯೇ ನಾಮಕರಣ ಮಾಡಲಾಗಿದೆ. ಹಲವಾರು ಹೆಸರುಗಳಿಂದ ಆಯಾ ಋತುಮಾನಗಳಲ್ಲಿ ಬೀಳು ಮಳೆಗಳನ್ನು ಹೆಸರಿಸುತ್ತಾರೆ ಪೂರ್ವಜರು. ನಮಗೆ ಅಶ್ವಿನಿ, ಭರಣಿ, ರೋಹಿಣಿ, ಕೃತಿಕಾ, ಆರಿದ್ರಾ, ಪುನರ್ವಸು, ಅತ್ತೆ-ಚಿತ್ತೆ ಮಳೆ, ಚಿಕ್ಕ ಬೂಸಲು ಮಳೆ ಹೀಗೆ ಕೆಲವೊಂದು ನಮ್ಮ ಗಮನಕ್ಕೆ ಬರದವೂಗಳು ಇವೆ. ಅವುಗಳಲ್ಲಿ ಗಾಂಧಾರಿ ಮಳೆಯೂ ಪ್ರಾಮುಖ್ಯತೆ ಪಡೆದಿದೆ.
ʻಗಾಂಧಾರಿ ಮಳೆʼ ಕೇಳಲು ಬಹಳ ಅಪರೂಪ. ಈ ಹೆಸರು ಅನೇಕರಿಗೆ ತಿಳಿದೇ ಇಲ್ಲ, ಆದರೆ, ಮಹಾಭಾರತದ ಗಾಂಧಾರಿ ಮಾತ್ರ ಎಲ್ಲರಿಗೂ ಚಿರಪರಿಚಿತ. ಗಾಂಧಾರ ದೇಶದ ರಾಜಕುಮಾರಿ, ದುರ್ಯೋಧನನ ತಾಯಿ, ಧೃತರಾಷ್ಟ್ರನ ಧರ್ಮ ಪತ್ನಿಯೆಂದು ಗೊತ್ತಿರುವ ವಿಷಯ. ಈಗ ಈ ಗಾಂಧಾರಿಗೂ..ಗಾಂಧಾರಿ ಮಳೆಗೂ ಏನು ಸಂಬಂಧ? ಗಾಂಧಾರಿ ಮಳೆಗೆ ಈ ಹೆಸರು ಹೇಗೆ ಬಂತು? ಅನ್ನೋದನ್ನು ತಿಳಿಯೋಣ.
ಗಾಂಧಾರಿ ಮಹಾಭಾರತದಲ್ಲಿ ಹಸ್ತಿನಾಪುರದ ರಾಜ ಧೃತರಾಷ್ಟ್ರನ ಹೆಂಡತಿ. ಕೌರವರಲ್ಲಿ ಜೇಷ್ಣ ದುರ್ಯೋಧನ ಸೇರಿದಂತೆ 101 ಮಕ್ಕಳ ತಾಯಿ. ಆಕೆಯ ಪತಿ ಧೃತರಾಷ್ಟ್ರ ಕುರುಡನಾಗಿದ್ದ ಕಾರಣ ಗಾಂಧಾರಿ ದೇವಿಯು ಕೂಡ ತನ್ನ ಪತಿ ಕಾಣದ ಜಗತ್ತನ್ನು ತಾನೂ ನೋಡುವುದಿಲ್ಲ ಎಂದು ಕಣ್ಣಿಗೆ ಕಪ್ಪ ಬಟ್ಟೆ ಕಟ್ಟಿಕೊಂಡ ಮಹಾ ಪತಿವ್ರತೆ ಎನಿಸಿಕೊಂಡವಳು. ಹೇಗೆ ಈಕೆ ಮುಂದೆ ಇರುವವರೂ ಈಕೆಗೆ ಕಾಣುವುದಿಲ್ಲವೋ ಈ ಮಳೆ ಬಂದರೆ ತಮ್ಮ ಮುಂದಿನ ವಸ್ತುವ ಕಣ್ಣಿಗೆ ಕಾಣದಂತೆ ಧೋ ಎಂದು ಸುರಿಯುವ ಮಳೆಯಾಗಿದೆ.
ಗಾಂಧಾರಿ ಮಳೆ ಬಂದರೆ ನಮ್ಮ ಕಣ್ಣುಂದಿರುವ ಯಾವುದೇ ವಸ್ತು ಕಾಣದೆ ಪರದೆಯಂತೆ ಬೀಳುವ ಮಳೆಗೆ ಈ ಹೆಸರು ಕರೆಯುತ್ತಾರೆಂಬುದು ರೂಢಿ ಮಾತು. ಅದರ ಜೊತೆಗೆ ಬೇಡವೆಂದರೂ ಬೀಳುವ ಭಾರೀ ಮಳೆ. ಎಷ್ಟೇ ಮಳೆ ಸುರಿದರೂ ನಿಷ್ಪ್ರಯೋಜಕವಾಗಿರುವ ಮಳೆಗೆ ಗಾಂಧಾರಿ ಮಳೆ ಎಂದೂ ಕರೆಯುತ್ತಾರೆ.
ಮಳೆ ಸುರಿದರೂ ಬಳಕೆಯಾಗದ ಮಳೆಯೇ ಗಾಂಧಾರಿ ಮಳೆ. ಅಗತ್ಯವಿಲ್ಲದಿದ್ದಾಗ, (ವಿಶೇಷವಾಗಿ ಕೃಷಿಗೆ ಅಗತ್ಯವಿಲ್ಲದಿದ್ದಾಗ) ಬೀಳುವ ಭಾರೀ ಮಳೆಯನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಕಣ್ಣಿಗೆ ಕಾಣದಂತೆ ಜೋರಾಗಿ ಬೀಳುವ ಮಳೆಗೆ ಧೃತರಾಷ್ಟ್ರ ಮಳೆ ಅಂತಲೂ ಕರೆಯಬಹುದಲ್ಲ ಎಂಬ ಸಂದೇಹ ಬರಬಹುದು. ಅದಕ್ಕೂ ಕಾರಣವಿದೆ. ಧೃತರಾಷ್ಟ್ರ ಹುಟ್ಟು ಕುರುಡ, ಆದರೆ ತನ್ನ ಪತಿಗಾಗಿ ಕಣ್ಣಿಲ್ಲದಂತೆ ಬದುಕಿದವಳು. ತನಗೆ ಹುಟ್ಟಿದ ಮಕ್ಕಳನ್ನೂ ಕೂಡ ಕೈಯಿಂದ ಮುಟ್ಟಿ ಅವರು ಹೇಗಿದ್ದಾರೆ ಎಂದು ತಿಳಿಯುತ್ತಿದ್ದಳು ಬಿಟ್ಟರೆ ಯಾವ ದಾರಿಯಲ್ಲಿ ಬೆಳೆಯುತ್ತಿದ್ದಾರೆ ಎಂಬುದನ್ನು ಗ್ರಹಿಸದೆ ಹೋದರು. ಹಾಗಾಗಿಯೇ ಅವರ ಈ ನಡವಳಿಕೆ ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು. ಅಂತೆಯೇ ಅನಾವಶ್ಯಕ ಸಮಯದಲ್ಲಿ ಬೀಳುವ ಅಕಾಲಿಕ ಮಳೆಯಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಕೌರವರು ತಪ್ಪುದಾರಿಯಲ್ಲಿ ಸಂಚರಿಸಿ ನಾಶವಾದಂತೆ ಅಕಾಲಿಕ ಮಳೆಯಿಂದ ಬೆಳೆಯೂ ಹಾನಿಯಾಗುತ್ತದೆ. ಆದ್ದರಿಂದಲೇ ಬೇಡವಾದಾಗ ಬೀಳುವ ಜೋರು ಮಳೆಗೆ ಗಾಂಧಾರಿ ಮಳೆ ಎನ್ನುತ್ತಾರೆ.