ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜೊಂದರಲ್ಲಿ ನಡೆದ ವೀಡಿಯೋ ಚಿತ್ರೀಕರಣ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗವೇ ತನಿಖೆ ನಡೆಸಲಿದೆ ಎಂದು ರಾಷ್ಟ್ರೀಯ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.
ಬುಧವಾರ ನಗರದ ಉಡುಪಿ ಬ್ರಹ್ಮಗಿರಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಲೇಜಿನಲ್ಲಿ ಮೂವರು ಮುಸ್ಲಿಂ ಹೆಣ್ಣುಮಕ್ಕಳು ಶೌಚಾಲಯದಲ್ಲಿ ಹಿಂದು ವಿದ್ಯಾರ್ಥಿನಿಯ ವಿಡಿಯೋ ಮಾಡಿ, ಹೊರಗಿನ ಮುಸ್ಲಿಂ ವ್ಯಕ್ತಿಗೆ ಕಳುಹಿಸಿದ್ದಾರೆ ಎಂದು ಮಾಹಿತಿ ಬಹಿರಂಗಗೊಂಡಿದ್ದು, ಆಯೋಗವೇ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಮೂವರು ವಿದ್ಯಾರ್ಥಿನಿಯರ ಹೆಸರನ್ನು ಬಳಸದೇ ತನಿಖೆ ಮಾಡಬೇಕು, ಈ ನಿಟ್ಟಿನಲ್ಲಿ ನಾನು ರಾಷ್ಟ್ರೀಯ ಆಯೋಗಕ್ಕೆ ತಿಳಿಸಿದ್ದೇನೆ. ರಾಷ್ಟ್ರೀಯ ಆಯೋಗದಿಂದ ಇಬ್ಬರು ಅಧಿಕಾರಿಗಳು ಬಂದು ತನಿಖೆ ಮಾಡುತ್ತಾರೆ. ಎಲ್ಲರೂ ಈ ಬಗ್ಗೆ ಜಾಗೃತರಾಗಬೇಕು, ಹೆಣ್ಣು ಮಕ್ಕಳು ಈ ರೀತಿ ಕೃತ್ಯವೆಸುವ ಮುನ್ನ ತಾನು ಒಂದು ಹೆಣ್ಣು ಅಂತಾ ತಿಳಿದುಕೊಳ್ಳಬೇಕು ಎಂದರು.
ಘಟನೆಯ ಬಗ್ಗೆ ಸರ್ಕಾರ ಮೌನವಹಿಸಿರುವುದು ಸರಿಯಲ್ಲ, ಸರ್ಕಾರ ಯಾವುದೇ ತಾರತಮ್ಯ ಮಾಡಬಾರದು, ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುತ್ತಿಲ್ಲ, ಉಸ್ತುವಾರಿ ಸಚಿವರು ಏಕೆ ಮೌನವಾಗಿದ್ದಾರೆ ? ಈ ವಿಚಾರದಲ್ಲಿ ರಾಜಕೀಯ ಮಾಡುವ ಅನಿವಾರ್ಯತೆ ಬರಬಾರದು, ಇಂತಹ ಸೂಕ್ಷ್ಮ ವಿಚಾರ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ ಎಂದವರು ತಿಳಿಸಿದರು.