ಐದು ಗ್ಯಾರಂಟಿ ಘೋ‍ಷಣೆ ಮಾಡಿರುವ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ: ಡಿಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐದು ಗ್ಯಾರಂಟಿಗಳನ್ನು ಘೋ‍ಷಣೆ ಮಾಡಿರುವ ಕಾರಣ ಈ ವರ್ಷ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬುಧವಾರ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರಿಗೆ ಸರ್ಕಾರದ ಪರಿಸ್ಥಿತಿ ವಿವರಿಸಿದ ಅವರು, ಐದು ಗ್ಯಾರಂಟಿಗಳ ಕಾರಣದಿಂದಾಗಿ ಸರ್ಕಾರ ಹಣಕಾಸಿನ ಇಕ್ಕಟ್ಟಿನಲ್ಲಿದೆ ಎನ್ನುವುದನ್ನೂ ತಮ್ಮ ಪಕ್ಷದ ಅಸಮಾಧಾನಗೊಂಡಿರುವ ಶಾಸಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎನ್ನುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆ ಡಿಕೆ ಶಿವಕುಮಾರ್‌ ಈ ಹೇಳಿಕೆ ನೀಡಿದ್ದಾರೆ.
ನಾವು ಈ ವರ್ಷ (ಐದು ಗ್ಯಾರಂಟಿಗಾಗಿ) 40,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ. ಹಾಗಾಗಿ ಈ ವರ್ಷ ನಾವು ಅಭಿವೃದ್ಧಿಯನ್ನು ನೀಡಲು ಸಾಧ್ಯವಿಲ್ಲ . ಇದು ಮಾತ್ರವಲ್ಲ ನೀರಾವರಿ ಮತ್ತು ಸಾರ್ವಜನಿಕ ಕೆಲಸಗಳಲ್ಲಿ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಿಲ್ಲ, ಆದರೆ ನಿರೀಕ್ಷೆಗಳು ಹೆಚ್ಚಿವೆ, ನಾವು ಶಾಸಕರಿಗೆ ಆದಷ್ಟು ದಿನ ದೂಡುವಂತೆ ಕೇಳಿದ್ದೇವೆ. ನಾವು ಸಿಎಲ್‌ಪಿ ಸಭೆಯಲ್ಲಿ ಈ ಬಗ್ಗೆ ಅವರಿಗೆ ವಿವರಿಸುತ್ತೇವೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದಾರೆ ಎಂದು ಶಿವಕುಮಾರ್ ಪ್ರಸ್ತಾಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!