ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು 3,000 ಕಾರುಗಳನ್ನು ಹೊತ್ತು ಸಾಗಿಸುತ್ತಿದ್ದ ಹಡಗಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.
ಈ ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಫ್ರೆಮೆಂಟಲ್ ಹೆದ್ದಾರಿಯಲ್ಲಿರುವ ಜರ್ಮನಿಯ ಬಂದರು ಬ್ರೆಮೆನ್‌ನಿಂದ ಈಜಿಪ್ಟ್ ಕಡೆಗೆ ಪ್ರಯಾಣಿಸುತ್ತಿರುವಾಗ ಡಚ್ ದ್ವೀಪವಾದ ಅಮೆಲ್ಯಾಂಡ್‌ನ ಉತ್ತರಕ್ಕೆ ಸುಮಾರು 27 ಕಿಲೋಮೀಟರ್ ದೂರದಲ್ಲಿದ್ದ ಹಡಗಿನಲ್ಲಿ ಇದ್ದಕ್ಕಿದ್ದಂತೆ ಬುಧವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಡಚ್ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ.
ಮೂರು ಸಾವಿರ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆಯ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯು ಇಡೀ ಹಡಗಿಗೆ ವ್ಯಾಪಿಸಿದೆ. ಬಳಿಕ 23 ಸಿಬ್ಬಂದಿಯನ್ನು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ರಕ್ಷಿಸಲಾಗಿದೆ. ಆದರೆ ಬೆಂಕಿಯನ್ನು ನಂದಿಸುವ ಪ್ರಯತ್ನ ವಿಫಲವಾಗಿದೆ ಎಂದು ಕರಾವಳಿ ಸಿಬ್ಬಂದಿ ತಿಳಿಸಿದ್ದಾರೆ.
ಓರ್ವ ಸಾವು, ಹಲವರಿಗೆ ಗಾಯ
ಘಟನೆಯ ವೇಳೆ ಹಡಗಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದಾನೆ. ಇನ್ನೂ ಕೆಲವರು ಹಡಗಿನಿಂದ ಸಮುದ್ರಕ್ಕೆ ಧುಮುಕಿದ್ದಾರೆ. ಲೈಫ್‌ಬೋಟ್‌ನ ಕ್ಯಾಪ್ಟನ್ ಇವರನ್ನು ರಕ್ಷಿಸಿದ್ದಾರೆ. ಸಮುದ್ರಕ್ಕೆ ಜಿಗಿದವರಲ್ಲಿ ಕೆಲವರ ಮೂಳೆ ಮುರಿದಿವೆ. ಕೆಲವರು ಸುಟ್ಟ ಗಾಯಗಳೊಂದಿಗೆ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದು, ಚಿಕಿತ್ಸೆಗಾಗಿ ಉತ್ತರ ನೆದರ್ಲೆಂಡ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೂ ಸಿಬ್ಬಂದಿಯ ಸಾವಿಗೆ ಹಾಗೂ ಹಡಗಿಗೆ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.