Sunday, December 21, 2025

CINE | ಕ್ರಿಸ್‌ಮಸ್‌ಗೆ ಕಿಚ್ಚನ ಗಿಫ್ಟ್: ‘ಮಾರ್ಕ್’ ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಬರೆದ ಅಭಿನಯ ಚಕ್ರವರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್ಟೈನರ್ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಕೇವಲ ನಾಲ್ಕು ದಿನ ಬಾಕಿ ಇರುವಂತೆಯೇ ರಾಜ್ಯಾದ್ಯಂತ ‘ಮಾರ್ಕ್’ ಜ್ವರ ಏರತೊಡಗಿದ್ದು, ಅಡ್ವಾನ್ಸ್ ಬುಕಿಂಗ್‌ನಲ್ಲಿ ಸಿನಿಮಾ ಹೊಸ ದಾಖಲೆ ಬರೆಯುತ್ತಿದೆ.

ಪ್ರಸ್ತುತ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕೇವಲ ‘ಫ್ಯಾನ್ಸ್ ಶೋ’ ಟಿಕೆಟ್ ಬುಕಿಂಗ್ ಮಾತ್ರ ಓಪನ್ ಆಗಿದೆ. ಬೆಳಿಗ್ಗೆ 6 ಗಂಟೆಗೆ ನಡೆಯಲಿರುವ ಈ ವಿಶೇಷ ಪ್ರದರ್ಶನಗಳ ಟಿಕೆಟ್ ಲಭ್ಯವಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನ ವೀರೇಶ್, ಸಿದ್ಧೇಶ್ವರ, ನವರಂಗ್, ಸಂತೋಷ್ ಮತ್ತು ಶ್ರೀನಿವಾಸ್ ನಂತಹ ಪ್ರತಿಷ್ಠಿತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಈಗಾಗಲೇ ಹೌಸ್‌ಫುಲ್ ಬೋರ್ಡ್ ಬಿದ್ದಿದೆ.

ಕಿಚ್ಚನ ಸಿನಿಮಾವನ್ನು ಮೊದಲ ಪ್ರದರ್ಶನದಲ್ಲೇ ನೋಡಬೇಕು ಎನ್ನುವ ಅಭಿಮಾನಿಗಳ ಆವೇಶದ ಮುಂದೆ ಟಿಕೆಟ್ ದರ ಗೌಣವಾಗಿದೆ. ವಿಶೇಷ ಶೋಗಳಿಗಾಗಿ 400 ರಿಂದ 500 ರೂಪಾಯಿಗಳವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದ್ದರೂ, ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಶಿವಮೊಗ್ಗದಂತಹ ಜಿಲ್ಲಾ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷವೆಂದರೆ, ಸೂಪರ್ ಹಿಟ್ ‘ಮ್ಯಾಕ್ಸ್’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಅದೇ ತಾಂತ್ರಿಕ ತಂಡವೇ ‘ಮಾರ್ಕ್’ ಚಿತ್ರಕ್ಕೂ ಕೆಲಸ ಮಾಡಿದೆ. ಸುದೀಪ್ ಅವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುವುದರ ಜೊತೆಗೆ ಸಹ-ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸುದೀಪ್, ಈ ಬಾರಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ‘ಮಾರ್ಕ್’ ಹಾಕುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

error: Content is protected !!