ಉಡುಪಿ ವಿಡಿಯೋ ವಿವಾದ: ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾದಿಂದ ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಬೆಂಗಳೂರು:

ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ನಡೆದ ಹಿಂದೂ ವಿದ್ಯಾರ್ಥಿನಿಯ ನಗ್ನ ವಿಡಿಯೋ ಚಿತ್ರೀಕರಣವನ್ನು ಖಂಡಿಸಿ, ಸಮಗ್ರ ತನಿಖೆಗೆ ಆಗ್ರಹಿಸಿ ನಗರದಲ್ಲಿ ಇಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇಡೀ ಸಮಾಜ ತಲೆತಗ್ಗಿಸುವ ಅತ್ಯಂತ ಖೇದಕರ ಘಟನೆ ಇದಾಗಿದೆ. ಶೌಚಾಲಯದಲ್ಲಿ, ಬಾತ್‍ರೂಂನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ಅದನ್ನು ತಮ್ಮ ತಮ್ಮ ನೆಟ್‍ವರ್ಕ್‍ಗಳಿಗೆ ಕಳುಹಿಸುವ ದೊಡ್ಡ ನಾಚಿಕೆಗೇಡಿನ ಸಂಗತಿ ಬಗ್ಗೆ ವಿಳಂಬವಾಗಿ ಎಫ್‍ಐಆರ್ ಮಾಡಿದ್ದು, ಇದು ಪ್ರಕರಣವನ್ನು ಮುಚ್ಚಿಹಾಕುವ ತಂತ್ರದಂತಿದೆ ಎಂದು ಆಕ್ಷೇಪ ಸೂಚಿಸಲಾಯಿತು.

ವಿಡಿಯೋಗ್ರಫಿ ಮಾಡಿದ 3 ವಿದ್ಯಾರ್ಥಿನಿಯರನ್ನು ಇನ್ನೂ ಬಂಧಿಸಿಲ್ಲ. ಸರಕಾರ ಅವರ ಮೇಲೆ ಎಫ್‍ಐಆರ್ ಮಾಡಲು ಆರಂಭದಲ್ಲಿ ಮೀನಾಮೇಷ ಎಣಿಸುತ್ತಿತ್ತು ಎಂದು ಟೀಕಿಸಿದರು. ಪ್ರಕರಣದ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು.

ಹಣೆಗೆ ಕಪ್ಪು ಪಟ್ಟಿ ಧರಿಸಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಮಾಡಿದರೂ ಸರಕಾರದ ಮೌನ ಸರಿಯೇ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!