ಹೊಸದಿಗಂತ ವರದಿ, ಕಲಬುರಗಿ:
ಆಧುನಿಕ ಬಂಗಾರಪ್ಪರೆಂದು ಕರೆಸಿಕೊಳ್ಳುವ ಬಿ. ಕೆ. ಹರಿಪ್ರಸಾದ್ ಅವರನ್ನು ರಾಜಕೀಯ ಷಡ್ಯಂತ್ರ ಮಾಡಿ, ಉದ್ದೇಶ ಪೂರ್ವಕವಾಗಿ ಕಡೆಗಣನೆ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿಗಳು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಕೆ ಹರಿಪ್ರಸಾದ್ ಸೇರಿದಂತೆ ಸಮುದಾಯದ ರಾಜಕೀಯ ಪಕ್ಷಗಳ ನಾಯಕರಿಗೆ ಆಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಈಡಿಗ, ಬಿಲ್ಲವ ನಾಮಧಾರಿ ಧೀವರ ಕುಲಬಾಂಧವರಿಗೆ ಶ್ರೀಗಳು ಪತ್ರ ಬರೆದಿದ್ದಾರೆ. ಅಲ್ಲದೆ ಸಮುದಾಯದ ಬಾಂಧವರು ಸಮಾಜದ ನಾಯಕರ ಬೆನ್ನೆಲುಬಾಗಿ ನಿಲ್ಲಬೇಕು. ಈ ಕುರಿತು ಶೀಘ್ರದಲ್ಲೇ ಈಡಿಗ ಸಮುದಾಯದ ನೇತೃತ್ವದಲ್ಲಿ ಸಭೆ ಸೇರಿ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವುದಕ್ಕೆ ಸಮುದಾಯ ತಯಾರಿರಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ.