ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ಸಿಬಿಐಗೆ ವರ್ಗಾಯಿಸಲು ಡಾ.ಅಶ್ವತ್ಥನಾರಾಯಣ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ವರ್ಗಾಯಿಸಿ ಎಂದು ರಾಜ್ಯದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ನಡೆದ ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣವನ್ನು ಖಂಡಿಸಿ ಮತ್ತು ಇದರ ಸಮಗ್ರ ತನಿಖೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಘಟನೆ ನಡೆದ ಕುರಿತು ಆರೋಪಿತ ವಿದ್ಯಾರ್ಥಿನಿಯರೇ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಘಟನೆ ನಡೆದುದು ನಿಜ; ಇದನ್ನು ಹಗುರವಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಇದನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಓಲೈಕೆ, ಜಿಹಾದಿ ರಾಜಕಾರಣ ಕಾರಣ ಎಂದು ಟೀಕಿಸಿದರು.

ರೈತ ವಿರೋಧಿ, ಮಹಿಳಾ ವಿರೋಧಿ, ದಲಿತ ವಿರೋಧಿ ರಾಜ್ಯ ಸರಕಾರ ಎಲ್ಲ ರಂಗಗಳಲ್ಲೂ ರಾಜ್ಯ ಸರಕಾರ ವಿಫಲವಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಸೋತಿದೆ ಎಂದು ಅವರು ದೂರಿದರು. ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆಯುವ ಕೆಲಸ ಆಗಬೇಕೆಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್   ಮಾತನಾಡಿ, ಈ ಘಟನೆಯ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. 3 ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಇದೊಂದು ಉದ್ದೇಶಪೂರ್ವಕ ಕೃತ್ಯ. ಅಪರಾಧ ಮಾಡಿದ ಹೆಣ್ಮಕ್ಕಳನ್ನು ರಕ್ಷಿಸುವ ಮತ್ತು ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಒತ್ತಡ ಹೇರುವ ಕೆಲಸ ನಡೆದಿದೆ. ಘಟನೆಯನ್ನು ಬೆಳಕಿಗೆ ತಂದವರ ಮೇಲೂ ಒತ್ತಡ ಹಾಕುತ್ತಿದ್ದಾರೆ. ಸಾಕ್ಷ್ಯ ನಾಶದ ಕೆಲಸವೂ ನಡೆದಿದೆ ಎಂದು ಟೀಕಿಸಿದರು.

ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!