ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ನರ್ಸಿಂಗ್ ಕಾಲೇಜಿನ ವಾಶ್ ರೂಂನಲ್ಲಿ ನಡೆದ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಲಾಗಿದೆ. ಘಟನೆಗೆ ಸಂಬಂಧಪಟ್ಟ ಫೋನ್ಗಳನ್ನು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ತಿಳಿಸಿದ್ದಾರೆ.
ಅವರು ಗುರುವಾರ, ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಶೌಚಾಲಯದಲ್ಲಿ ಹಿಡನ್ ಕೆಮರಾ ಇರಿಸಿಲ್ಲ
ಆರೋಪಗಳ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಶೌಚಾಲಯದಲ್ಲಿ ಹಿಡನ್ ಕೆಮರಾ ಇರಿಸಲಾಗಿಲ್ಲ. ಇದೊಂದು ಶೈಣಿಕ ಕೇಂದ್ರವಾಗಿದ್ದು, ಹಿಡನ್ ಕೆಮರಾ ಇಡಲು ಸಾಧ್ಯವಿಲ್ಲ. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ಅಯೋಗದಿಂದಲೂ ತನಿಖೆ ಮುಂದುವರಿಯಲಿದೆ. ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದರು.
ಸೂಕ್ತ ಸಾಕ್ಷ್ಯಧಾರ ಸಂಗ್ರಹಕ್ಕೆ ಸ್ವಲ್ಪ ಸಮಯಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕು. ಯಾವುದೇ ವದಂತಿ ಹಾಗೂ ವಾಟ್ಸಾಪ್ ಸಂದೇಶಗಳಿಗೆ ಗಮನಕೊಡಬಾರದು. ತನಿಖೆ ಒಂದು ಹಂತಕ್ಕೆ ಬಂದ ಬಳಿಕ ಅಯೋಗದ ವತಿಯಿಂದಲೇ ಮಾಹಿತಿ ನೀಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ತನಿಖಾಧಿಕಾರಿ ಮಲ್ಪೆ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಗೌಡ, ಎಸ್ಐ ಸುಷ್ಮಾ ಭಂಡಾರಿ, ಕಾಲೇಜಿನ ನಿರ್ದೇಶಕಿ ರಶ್ಮಿ, ಪ್ರಾಂಶುಪಾಲ ರಾಜೀಬ್ ಮಂಡಲ್, ಕಾನೂನು ಸಲಹಾ ಸಮಿತಿ ಸದಸ್ಯೆ ಮೇರಿ ಶ್ರೇಷ್ಠ, ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು.