ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರದಲ್ಲಿ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಶ್ರೀರಾಮ ದೇವರ ವಿಗ್ರಹ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಗುರುವಾರ ತಿಳಿಸಿದ್ದಾರೆ.
‘2024ರ ಜನವರಿ 15 ಮತ್ತು 24ರ ನಡುವೆ ಸಮಾರಂಭ ನಡೆಯಲಿದೆ ಎಂದು ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದೇವೆ. ಆದರೆ ನಿಖರವಾದ ದಿನಾಂಕವನ್ನು ಅವರೇ ನಿರ್ಧರಿಸಲಿದ್ದಾರೆ’ ಎಂದೂ ಹೇಳಿದ್ದಾರೆ. ಸಮಾರಂಭಕ್ಕೆ ಅಂದಾಜು 10 ಸಾವಿರ ಮಂದಿ ಅತಿಥಿಗಳನ್ನು ಆಹ್ವಾನಿಸಲಾಗುವುದು ಎಂದಿದ್ದಾರೆ.
‘ಮೋದಿ ಅವರಿಗೆ ಬರೆದಿರುವ ಪತ್ರಕ್ಕೆ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಸಹಿ ಹಾಕಿದ್ದಾರೆ. ಪ್ರಧಾನಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡರೆ ದೇಶದ ಪ್ರತಿಷ್ಠೆ ಜಗತ್ತಿನಾದ್ಯಂತ ಇನ್ನಷ್ಟು ಹೆಚ್ಚಲಿದೆ’ ಎಂದೂ ತಿಳಿಸಿದ್ದಾರೆ.
ದೇಗುಲದ ನೆಲ ಮಹಡಿಯ ಕೆಲಸವನ್ನು ಡಿಸೆಂಬರ್‌ನೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಮತ್ತು ಮುಂದಿನ ವರ್ಷದ ಜನವರಿಯೊಳಗೆ ಅದನ್ನು ಭಕ್ತರಿಗೆ ತೆರೆಯಲಾಗುವುದು ಎಂದೂ ರಾಯ್ ಅವರು ಹೇಳಿದ್ದಾರೆ.