ಹೊಸದಿಗಂತ ವರದಿ, ಕಲಬುರಗಿ:
ಖಾಸಗಿ ಬ್ಯಾಂಕ್‌ವೊಂದರ ಗ್ರಾಹಕರಾದ ಮಂಜುನಾಥ ಶಂಕ್ರೆಪ್ಪ ಹಾದಿಮನಿ ದಂಪತಿಯು ರಿವಾರ್ಡ್ ಪಾಯಿಂಟ್ ನ ಆಸೆಗೆ ಬಿದ್ದು, ಕ್ರೆಡಿಟ್ ಕಾರ್ಡ್‌ನಿಂದ 7.85 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಜಗತ್ ವೃತ್ತದ ಖಾಸಗಿ ಬ್ಯಾಂಕಿನ ಗ್ರಾಹಕ ಮಂಜುನಾಥ್ ಹಾದಿಮನಿ ಮೋಸದ ಜಾಲಕ್ಕೆ ಸಿಲುಕಿ, ಕ್ರೆಡಿಟ್ ಕಾರ್ಡ್ ನಿಂದ 7.85 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಶಕ್ತಿ ಕಾಲೊನಿ ನಿವಾಸಿ ಮಂಜುನಾಥ ಶಂಕ್ರೆಪ್ಪ ಹಾದಿಮನಿ ಅವರು ಪತ್ನಿ ಹೆಸರಿನಲ್ಲಿ 10.88 ಲಕ್ಷ ರೂ. ವರೆಗಿನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ವಂಚಿತರು ಜುಲೈ 23ರಂದು 5,999 ರೂ ರಿವಾರ್ಡ್ ಬಂದಿದೆ ಎಂದು ಮೆಸೇಜ್ ಮೂಲಕ ಲಿಂಕ್ ಕಳುಹಿಸಿದ್ದಾರೆ.
ಅದನ್ನು ನಂಬಿದ ದಂಪತಿ ಲಿಂಕ್‌ಗೆ ಹೋಗಿ, ಅಲ್ಲಿ ಕೇಳಿರುವ ಎಲ್ಲ ಮಾಹಿತಿ ತುಂಬಿದ್ದಾರೆ. ಅದೇ ದಿನ ಸಂಜೆ ವೇಳೆ 1.79 ಲಕ್ಷ ರೂ, 1.78 ಲಕ್ಷ ರೂ, 75 ಸಾವಿರ ರೂ, 1.80 ಲಕ್ಷ ರೂ, 1.85 ಲಕ್ಷ ರೂ ಸೇರಿ ಒಟ್ಟು 7.85 ಲಕ್ಷ ರೂ ಕಡಿತ ಮಾಡಿಕೊಂಡಿದ್ದಾರೆ. ಅನುಮಾನದಿಂದ ಬ್ಯಾಂಕ್‌ಗೆ ತೆರಳಿ, ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ತಿಳಿಸಿದ್ದಾರೆ. ವಿಚಾರಣೆಯ ಬಳಿಕ ಮೋಸ ಹೋಗಿದ್ದು ಗೋತ್ತಾಗಿದೆ. ಬಳಿಕ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.