ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಪ್ರವಾಹ ಉಂಟಾಗಿ, 30 ಮಂದಿ ಕೊಚ್ಚಿ ಹೋಗಿದ್ದು, 18 ಮೃತದೇಹಗಳು ಪತ್ತೆಯಾಗಿವೆ. ಇನ್ನು 12 ಮಂದಿ ನಾಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ವರಂಗಲ್ ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವು ಗ್ರಾಮಗಳು ಪ್ರವಾಹದಲ್ಲಿ ಮುಳುಗಿವೆ. ಜಂಪಣ್ಣ ಹೊಳೆಯಲ್ಲಿ 8 ಮಂದಿ ಮೃತದೇಹಗಳು ಪತ್ತೆಯಾಗಿವೆ.
ಗೋದಾವರಿ, ಪ್ರಾಣಹಿತ ನದಿಗಳು ತುಂಬಿ ಹರಿಯುತ್ತಿದ್ದು, ನಿರ್ಮಲ್ ಜಿಲ್ಲೆಯ ಸಿಲಾ ಕೆರೆ ಕುಸಿದ ಹಿನ್ನೆಲೆಯಲ್ಲಿ 150 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭದ್ರಾಚಲಂನಲ್ಲಿ ಪ್ರವಾಹದ ಮಟ್ಟ 53.1 ಅಡಿ ತಲುಪಿದ್ದು, ಮೂರನೇ ಅಪಾಯದ ಎಚ್ಚರಿಕೆ ನೀಡಲಾಗಿದೆ.
ತೆಲಂಗಾಣದಲ್ಲಿ ಪ್ರವಾಹದಿಂದಾಗಿ 5.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರವಾಹದಿಂದಾಗಿ ಹೈದರಾಬಾದ್ ನಗರದ 20 ಕಾಲೋನಿಗಳು ಇನ್ನೂ ಪ್ರವಾಹದ ನೀರಿನಲ್ಲಿವೆ. ತೆಲಂಗಾಣ ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರ ತಿಳಿಸಿದೆ. IMD ಪ್ರಕಾರ ಆದಿಲಾಬಾದ್, ಕಾಮರೆಡ್ಡಿ, ಯಾದಾದ್ರಿ, ಸಂಗಾರೆಡ್ಡಿ, ನಿಜಾಮಾಬಾದ್, ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಶನಿವಾರ ಆಯಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.