ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಹರಂ ಮೆರವಣಿಗೆ ವೇಳೆ ಜವರಾಯ ಅಟ್ಟಹಾಸ ಮೆರೆದಿದ್ದು, ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ರಾಜ್ಯದಲ್ಲಿ ನಡೆದಿದೆ. ನಡೆದ ವಿದ್ಯುದಾಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೂ 13 ಜನರು ಗಾಯಗೊಂಡಿದ್ದಾರೆ.
ಜಾರ್ಖಂಡ್ ರಾಜ್ಯದ ಬೊಕಾರೊ ನಗರದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಮೊಹರಂ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಹೈವೋಲ್ಟೇಜ್ ತಂತಿ ತಗುಲಿ ದುರ್ಘಟನೆ ಸಂಭವಿಸಿದೆ. ಹಬ್ಬದ ವಾತಾವರಣದಲ್ಲಿ ಸೂತಕದ ಛಾಯೆ ಆವರಿಸಿದ್ದು, ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಬೊಕಾರೊ ಥರ್ಮಲ್ ಡಿವಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಅಂತೆಯೇ ಇತ್ತ ಗುಜರಾತ್ನ ಜಾಮ್ನಗರದಲ್ಲಿ ತಾಜಿಯಾ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವನ್ನಪ್ಪಿದ್ದು, 5 ಜನರು ಗಾಯಗೊಂಡಿದ್ದಾರೆ.