ಹೊಸದಿಗಂತ ಡಿಜಿಟಲ್ ಡೆಸ್ಕ್:
ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯಲ್ಲಿ ಭಾರೀ ಮಳೆಯಾಯಿಂದಾಗಿ ಭದ್ರಾಚಲಂನಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ನೀರಿನ ಮಟ್ಟದ ಏರಿಕೆಯಿಂದಾಗಿ ಆ ಭಾಗದ ಜನರು ಭಯಭೀತರಾಗಿದ್ದು, ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸದ್ಯ ಭದ್ರಾಚಲಂನಲ್ಲಿ ನೀರಿನ ಮಟ್ಟ 56 ಅಡಿ ದಾಟಿದೆ.
ಗೋದಾವರಿ ನೀರಿನ ಮಟ್ಟ ವೇಗವಾಗಿ ಹೆಚ್ಚುತ್ತಿದ್ದು, ಮೂರನೇ ಅಪಾಯದ ಎಚ್ಚರಿಕೆ ಮುಂದುವರಿದಿದೆ. ಸುಮಾರು 16 ಲಕ್ಷ ಕ್ಯೂಸೆಕ್‌ನಷ್ಟು ಪ್ರವಾಹದ ನೀರನ್ನು ಕೆಳಕ್ಕೆ ಬಿಡಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಇದುವರೆಗೆ ಸುಮಾರು 5 ಸಾವಿರ ಜನರನ್ನು 49 ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋದಾವರಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿತ್ತು. ಹೀಗಾಗಿ ಗೋದಾವರಿ ದಡಕ್ಕೆ ಯಾರೂ ಹೋಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಭದ್ರಾಚಲಂನಿಂದ ಹತ್ತಿರದ ಮಂಡಲಗಳಾದ ದುಮ್ಮುಗುಡೆಂ, ಚರ್ಲಾ, ವಾಜೇಡು, ವೆಂಕಟಾಪುರಂ ಮತ್ತು ಕೋನವರಂ, ಬಿಆರ್ ಪುರಂ, ಚಿಂತೂರು ಮಂಡಲಗಳು ಜಲಾವೃತಗೊಂಡಿವೆ.