ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ಸಚಿವರು ಶಾಸಕರ ನಡುವೆ ಮುಸುಕಿನ ಗುದ್ದಾಟ
ನಡೆಯುತ್ತಿದೆ.
ಶಾಸಕರು ಅನುದಾನದ ಆಕ್ರೋಶ, ವರ್ಗಾವಣೆ ಸಮರ, ಮಂತ್ರಿ ಸ್ಥಾನದ ಕಿಚ್ಚು, ಸಚಿವರು ಸ್ಪಂದಿಸುತ್ತಿಲ್ಲವೆಂಬ ಸಿಟ್ಟು ಅನೇಕ ದೂರಗಳ ಪಟ್ಟಿ ರೆಡಿಮಾಡಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಿಟ್ಟು ಜೋರಾಗಿತ್ತು.
ಸಿಎಂ ಸಭೆಯಲ್ಲಿ ತಣ್ಣೀರು ಸುರಿಯುವ ಯತ್ನ ಮಾಡಿದ್ರೂ, ಆದ್ರೆ ಕೆಲ ಶಾಸಕರ ಎದೆಯೊಳಗಿನ ಬೆಂಕಿ ಇನ್ನೂ ಕುದಿಯುತ್ತಲೇ ಇದೆ. ಹೀಗಾಗಿ ಹೈಕಮಾಂಡ್ ಎಂಟ್ರಿ ಕೊಟ್ಟಿದ್ದು, ಆಗಸ್ಟ್ 2ಕ್ಕೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.
ಸಿಎಂ, ಡಿಸಿಎಂ ಹಾದಿಯಾಗಿ 37 ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಸಚಿವರು ಸೇರಿ ಬಸವರಾಜ ರಾಯರೆಡ್ಡಿ, ರಮೇಶ್ ಕುಮಾರ್, ಆರ್.ವಿ.ದೇಶಪಾಂಡೆ, ಬಿ.ಎಲ್.ಶಂಕರ್, ಬಿ.ಕೆ.ಹರಿಪ್ರಸಾದ್, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರಿಗೂ ಆಹ್ವಾನ ನೀಡಿದೆ.
ಅಗಸ್ಟ್ 2 ರಂದು ನಡೆಯುವ ಕಾಂಗ್ರೆಸ್ ಹಿರಿಯ ಮೀಟಿಂಗ್ನ ಅಜೆಂಡಾ ಏನು ಎಂಬ ಗುಸು ಗುಸು ಚರ್ಚೆ ಕೈ ಪಾಳಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಅತ್ತ ಕೈ ನಾಯಕರು ಮುಂದಿನ ಲೋಕಸಭಾ ಚುನಾವಣೆಗೆ ತಯಾರಿಗೆ ಸಂಬಂಧಿಸಿದ್ದು ಎಂದು ಹೇಳುತ್ತಿದ್ದರೂ ಅಸಲಿ ಕಹಾನಿಯೇ ಬೇರೆ ಇದೆ ಎನ್ನುವುದು ದೆಹಲಿಯ 10 ಜನಪತ್ ರಸ್ತೆಯಿಂದ ಕೇಳಿ ಬರುತ್ತಿರುವ ಮಾಹಿತಿ.