ಕುಶಾಲನಗರ-ಮಡಿಕೇರಿ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಎರಡು ಹಸುಗಳ ಸಾವು

ಹೊಸದಿಗಂತ ವರದಿ,ಕುಶಾಲನಗರ:

ಕುಶಾಲನಗರ-ಮಡಿಕೇರಿ ಹೆದ್ದಾರಿ ಬದಿ ಮಲಗಿದ್ದ ಜಾನುವಾರುಗಳಿಗೆ ಅಪರಿಚಿತ‌ ವಾಹನ ಡಿಕ್ಕಿಯಾದ ಪರಿಣಾಮ ಎರಡು ಹಸುಗಳು ಸಾವಿಗೀಡಾಗಿ ಮತ್ತೆರಡು ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ಆನೆಕಾಡು ಬಳಿ ನಡೆದಿದೆ.

ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಸುತ್ತಮುತ್ತಲ‌ ನಿವಾಸಿಗಳ ಜಾನುವಾರುಗಳು ಕಾಡಿನಲ್ಲಿ ಹುಲ್ಲು ಸೇರಿದಂತೆ ಇತರೆ ಅಹಾರವನ್ನು ತಿಂದು ಬಂದು ಹೆದ್ದಾರಿಯ ಪಕ್ಕದಲ್ಲಿ, ಮತ್ತು ರಸ್ತೆಯಲ್ಲಿ ಮಲಗುವುದು ಸಾಮಾನ್ಯವಾಗಿದೆ.

ಆದರೆ ಭಾನುವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಹಸುಗಳಿಗೆ ಹೆದ್ದಾರಿಯಲ್ಲಿ ಸಾಗುವ ಅಪರಿಚಿತ ವಾಹನಗಳ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ಹಸುಗಳು ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಇನ್ನೆರಡು ಹಸುಗಳನ್ನು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕುಶಾಲನಗರ ಪಶು ಚಿಕಿತ್ಸಾಲಯಕ್ಕೆ ಸಾಗಿಸಿ ಪಶು ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಆನೆಕಾಡು ಸಮೀಪ ವಾಹನ ಡಿಕ್ಕಿಯಾಗಿ ಹಸುಗಳು ಸಾವನ್ನಪ್ಪಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕುಶಾಲನಗರ ಡಿ,ವೈ,ಎಸ್, ಪಿ, ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್, ಮತ್ತು ಕುಶಾಲನಗರ ಸಂಚಾರಿ ಠಾಣಾಧಿಕಾರಿ ಕಾಶಿಕುಮಾರ್, ಕುಶಾಲನಗರ ಸಮಾಜ ಸೇವಕ ಚಂದ್ರು ಮತ್ತಿತರರು, ವಾಹನ ಡಿಕ್ಕಿಯಾಗಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಹಸುಗಳನ್ನು ಪಶು ಚಿಕಿತ್ಸಾಲಯಕ್ಕೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಡಿಕ್ಕಿಯಾಗಿದ್ದ ಐದು ಹಸುಗಳಲ್ಲಿ ಒಂದು ಹಸುವಿನ ಕೊಂಬು ಮಾತ್ರ ಮುರಿದಿದ್ದು, ಅದು ಕಾಡಿನತ್ತ ತೆರಳಿದೆ. ಸಾವನ್ನಪ್ಪಿದ ಎರಡು ಹಸುಗಳನ್ನು ಗ್ರಾಮ ಪಂಚಾಯತಿ ವತಿಯಿಂದ ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿ ಗುಂಡಿ ತೆಗೆದು ಮುಚ್ಚಲಾಗಿದೆ.

ಪೊಲೀಸ್ ಇಲಾಖೆಯ ಸೇವೆಗೆ‌ ಮೆಚ್ಚುಗೆ: ಕುಶಾಲನಗರ -ಮಡಿಕೇರಿ ಹೆದ್ದಾರಿಯ ಆನೆಕಾಡು ಸಮೀಪದಲ್ಲಿ ಹಸುಗಳಿಗೆ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಧಳಕ್ಕೆ ಭೇಟಿ ನೀಡಿದ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ರಸ್ತೆ ಬದಿಯ ಹಳ್ಳದಲ್ಲಿ ಬಿದ್ದಿರುವ ಹಸುವನ್ನು ಸಾರ್ವಜನಿಕರ ಸಹಕಾರದೊಂದಿಗೆ ಮೇಲಕ್ಕೆತ್ತಿ ಟ್ರ್ಯಾಕ್ಟರ್’ಗೆ ಹಾಕಿ ಮಾನವೀಯತೆ ಮೆರೆದಿರುವ ಕ್ರಮಕ್ಕೆ ಸಾರ್ವಜನಿಕರಿಂದ‌ ಮೆಚ್ಚುಗೆ ವ್ಯಕ್ತವಾಗಿದೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!