ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಜನರಿಗೆ ಈಗ ಉಸಿರಾಡುವುದೇ ಒಂದು ಸವಾಲಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಿಂದ ನಗರದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಆತಂಕಕಾರಿ ಮಟ್ಟವನ್ನು ತಲುಪಿದೆ. ನಿನ್ನೆ 200ರ ಆಸುಪಾಸಿನಲ್ಲಿದ್ದ ವಾಯು ಮಾಲಿನ್ಯದ ಸೂಚ್ಯಂಕ ಇಂದು 190ರಷ್ಟಿದೆ. ಇದು ಸಾಮಾನ್ಯ ಮಟ್ಟಕ್ಕಿಂತ ಬಹಳ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.
ನಗರದಲ್ಲಿ ಪ್ರಸ್ತುತ PM2.5 ಪ್ರಮಾಣ 112ಕ್ಕೆ ಏರಿಕೆಯಾಗಿದ್ದರೆ, PM10 ಪ್ರಮಾಣ 155ಕ್ಕೆ ತಲುಪಿದೆ. ಕಳೆದ ನಾಲ್ಕು ವರ್ಷಗಳಲ್ಲೇ ಈ ಬಾರಿ ಬೆಂಗಳೂರಿನ ಹವೆ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿರುವುದು ವರದಿಯಾಗಿದೆ.
ರಾಜ್ಯಾದ್ಯಂತ ಬೀಸುತ್ತಿರುವ ಶೀತಗಾಳಿಯ ನಡುವೆ ಈ ವಾಯು ಮಾಲಿನ್ಯವು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ತೊಂದರೆ ಇರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಗಾಳಿಯ ಗುಣಮಟ್ಟ 150 ದಾಟಿದರೆ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣಿಸುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಗಾಳಿಯ ಗುಣಮಟ್ಟದಲ್ಲಿ ಸ್ಥಿರತೆ ಇಲ್ಲದ ಕಾರಣ, ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅನಗತ್ಯವಾಗಿ ಕಲುಷಿತ ವಾತಾವರಣಕ್ಕೆ ಒಡ್ಡಿಕೊಳ್ಳಬಾರದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

