ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಟ್ಚೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ, ಹೊಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, ಬಜೆಟ್ ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ, ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಮೂಲಕ ಬರುವಂತ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿಡೇ ಎಂದರು.
ದಲಿತರಿಗೆ ದ್ರೋಹ
ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದು, ರಾಜ್ಯದ ಅಭಿವೃದ್ಧಿಯ ಕತೆ ಅಯೋಮಯವಾಗಲಿದೆ. ಎಸ್ಸಿಪಿ ಟಿಎಸ್ ಪಿ ಕಾಯ್ದೆಯಡಿ ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ದಿಗೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 11 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿದ್ದು, ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದರು.
ರಾಜ್ಯ ಸರ್ಕಾರ ಎಸ್ಸಿಪಿ ಟಿಎಸ್ಪಿ ಯೋಜನೆಗೆ 34 ಸಾವಿರ ಕೋಟಿ ಬದಲು ಕೇವಲ 23 ಸಾವಿರ ಕೋಟಿ ರೂ.ಗೆ ಅನುಮೋದನೆ ನೀಡಿದಂತಾಗಿದ್ದು, ಇದು ಎಸ್ಸಿಪಿ ಕಾಯ್ದೆಯ ಉಲ್ಲಂಘನೆಯ ಜೊತೆಗೆ ಆ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.