ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಗಾನ್, ಹಮ್ ದಿಲ್ ದೇ ಚುಕೇ ಸನಮ್, ಜೋದಾ ಅಕ್ಬರ್ ಸೇರಿದಂತೆ ಹಲವು ಹಿಟ್ ಚಿತ್ರಗಳ ಕಲಾ ನಿರ್ದೇಶಕ ನಿತಿನ್ ದೇಸಾಯಿ (57), ತಮ್ಮ ಎನ್‌ಡಿ ಸ್ಟುಡಿಯೊಗಾಗಿ ಪಡೆದಿದ್ದ ಸಾಲವನ್ನು ಕಾಲಮಿತಿಯೊಳಗೆ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ರಾಯ್‌ಗಡ್ ಜಿಲ್ಲೆಯ ಕರ್ಜಾತ್‌ನಲ್ಲಿ ನಿರ್ಮಿಸಿರುವ ಎನ್‌ಡಿ ಸ್ಟುಡಿಯೊದಲ್ಲಿ ಬುಧವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಿತಿನ್ ಅವರ ಮೃತದೇಹ ಪತ್ತೆಯಾಗಿತ್ತು. ಇದೊಂದು ಅಸಹಜ ಸಾವು ಎಂಬ ಪ್ರಕರಣ ಖಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ನಿತಿನ್, ₹252 ಕೋಟಿ ಸಾಲ ಹೊತ್ತಿದ್ದರು. ಇದನ್ನು ಕಾಲಮಿತಿಯೊಳಗೆ ತೀರಿಸಲಾಗದ ಕಾರಣ ನ್ಯಾಯಾಲಯ ಕಳೆದ ವಾರ ನೋಟಿಸ್ ನೀಡಿತ್ತು.
‘ಸ್ಥಳೀಯರ ಪ್ರಕಾರ ನಿತಿನ್ ದೇಸಾಯಿ ಅವರು ಮಂಗಳವಾರ ಸಂಜೆ ಸ್ಟುಡಿಯೊಗೆ ಬಂದಿದ್ದರು. ಅಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದ ಮುಖ್ಯ ವೇದಿಕೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಸುದ್ದಿ ತಿಳಿದು ಅಲ್ಲಿಗೆ ಹೋದೆವು ಎಂದಿದ್ದಾರೆ’ ಎಂದು ತಿಳಿಸಿದರು.
‘ಬುಧವಾರ ಎನ್‌ಡಿ ಸ್ಟುಡಿಯೊದಲ್ಲಿ ನಿತಿನ್ ಮೃತದೇಹ ಪತ್ತೆಯಾಯಿತು. ಸೈಬರ್ ವಿಧಿವಿಜ್ಞಾನ ತಂಡ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ ಸಂಗ್ರಹಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ ಘಾರ್ಗೆ ತಿಳಿಸಿದರು.
ನಿತಿನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಏಕನಾಥ ಶಿಂಧೆ ಶೋಕ ವ್ಯಕ್ತಪಡಿಸಿದ್ದು, ಇದು ತನಗೆ ಹಾಗೂ ಸಿನಿಮಾ ರಂಗಕ್ಕೆ ಭರಿಸಲಾಗದ ನಷ್ಟ ಮತ್ತು ಅತ್ಯಂತ ಶೋಖದ ದಿನ’ ಎಂದಿದ್ದಾರೆ.
ಶರದ್ ಪವಾರ್ ಅವರೂ ಕಂಬನಿ ಮಿಡಿದು, ‘ಮರಾಠಿಯು ಒಬ್ಬ ಕಠಿಣ ಪರಿಶ್ರಮದ ಉತ್ತಮ ಉದ್ಯಮಿಯನ್ನು ಕಳೆದುಕೊಂಡಿದೆ’ ಎಂದಿದ್ದಾರೆ.