ಹೊಸದಿಗಂತ ವರದಿ ಕೊಪ್ಪಳ:
ಭತ್ತದ ನಾಡು ಗಂಗಾವತಿ ರೈಲು ನಿಲ್ದಾಣವನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಕೊಪ್ಪಳ ಲೋಕಸಭಾ ಸಂಸದ ಕರಡಿ ಸಂಗಣ್ಣ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ನವದೆಹಲಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಸಂಸದ ಕರಡಿ ಸಂಗಣ್ಣ ಅವರು, ಗಂಗಾವತಿ ರೈಲು ನಿಲ್ದಾಣ ಅಭಿವೃದ್ಧಿ ಯಿಂದ ಅಂಜನಾದ್ರಿಗೆ ತೆರಳುವ ಭಕ್ತರ ಸಂಖ್ಯೆ ಅಧಿಕವಾಗಲಿದೆ ಎಂದು ಸಚಿವರ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಮನವಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಂಸದ ಅಣ್ಣಸಾಹೇಬ್ ಜೊಲ್ಲೆ, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ಈ ಕುರಿತು ಪ್ರಕಟಣೆ ನೀಡಿರುವ ಸಂಸದ ಸಂಗಣ್ಣ ಕರಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳಿಗೆ ಬುಲೆಟ್ ಟ್ರೈನ್ ವೇಗ ದೊರೆತಿದೆ. ನನ್ನ ಮನವಿ ಮೇರೆಗೆ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆಯಾಗಿವೆ. ಇವುಗಳ ಜತೆಗೆ ಗಂಗಾವತಿ ರೈಲು ನಿಲ್ದಾಣ ಸೇರ್ಪಡೆಗೊಳಿಸಲು ಮನವಿ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ 70 ವರ್ಷದಿಂದ ಆಗದ ರೈಲ್ವೆ ಯೋಜನೆಗಳನ್ನು ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮಾಡಲಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಂದೇ ತಾಲೂಕಿಗೆ ಸೀಮಿತವಾಗಿದ್ದ ರೈಲ್ವೆ ಯೋಜನೆಯನ್ನು 6 ತಾಲೂಕಿಗೆ ವಿಸ್ತರಿಸಲಾಗಿದೆ. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ರೈಲ್ವೆ ಯೋಜನೆ ವಿಸ್ತರಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಬದ್ಧತೆಯಾಗಿದೆ. ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳಿಗೆ ತಲಾ 20 ಕೋಟಿ ರೂ. ಬಿಡುಗಡೆಯಾಗಲಿದೆ. ಈ ಭಾಗದ ಐತಿಹಾಸಿಕ ಸ್ಮಾರಕಗಳ ಚಿತ್ರದಂತೆ ರೈಲು ನಿಲ್ದಾಣದ ಮುಂಭಾಗ ಅಭಿವೃದ್ಧಿಯಾಗಲಿದೆ ಎಂದರು.