ಚೀತಾಗಳ ಸಾವಿಗೆ ಕಾರಣವೇನು?: ತಜ್ಞರು ನೀಡಿದ್ರು ಮಹತ್ವದ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಚೀತಾಗಳಲ್ಲಿ ಬೆಳವಣಿಗೆಯಾಗುತ್ತಿರುವ ತುಪ್ಪಳದ ಕಾರಣದಿಂದಾಗಿ ಮಾರಣಾಂತಿಕ ಸೋಂಕಿಗೆ ತುತ್ತಾಗಿ ಸಾವಿಗೀಡಾಗುತ್ತಿವೆ ಎಂದು ಚೀತಾ ಯೋಜನೆಯ ತಜ್ಞರು ಹೇಳಿದ್ದಾರೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಬುಧವಾರ ಮತ್ತೊಂದು ಹೆಣ್ಣು ಚೀತಾ ಸಾವನ್ನಪ್ಪಿತ್ತು. ಹೀಗಾಗಿ ತುಪ್ಪಳವನ್ನು ಶೇವ್‌ ಮಾಡುವ ಮೂಲಕ ಚೀತಾಗಳನ್ನು ಕಾಪಾಡಿಕೊಳ್ಳಬಹುದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.

ಆಫ್ರಿಕಾದಲ್ಲಿ ಚಳಿಗಾಲ ಆರಂಭವಾಗುವುದರಿಂದ ಅದರಿಂದ ರಕ್ಷಣೆ ಪಡೆದುಕೊಳ್ಳಲು ಚೀತಾಗಳು ತುಪ್ಪಳವನ್ನು ಬೆಳೆಸಿಕೊಳ್ಳುತ್ತವೆ. ಆದರೆ ಇದು ಭಾರತದಲ್ಲಿ ಅವುಗಳಿಗೆ ಸೋಂಕಿಗೆ ಕಾರಣವಾಗುತ್ತಿದೆ. ಚೀತಾಗಳು ತಮ್ಮ ಹಿಂಗಾಲುಗಳ ಮೇಲೆ ಕುಳಿತಾಗ ಬೆನ್ನುಮೂಳೆಯ ಮೂಲಕ ಈ ಸೋಂಕು ಕೆಳಭಾಗದವರೆಗೂ ಹರಿಯುವುದರಿಂದ ಸೋಂಕು ಹೆಚ್ಚಾಗಿ ಸಾವಿಗೀಡಾಗುತ್ತಿವೆ. ಆದರೆ ಉದ್ದಕೂದಲು ಹೊಂದಿಲ್ಲದ ಚೀತಾಗಳು ಈ ಸಮಸ್ಯೆಗೆ ತುತ್ತಾಗಿಲ್ಲ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

5 ತಿಂಗಳಲ್ಲಿ 9 ಚೀತಾ ಸಾವು
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮಾರ್ಚ್‌ನಿಂದ ಈವರೆಗೆ ಸಾವನ್ನಪ್ಪಿದ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬುಧವಾರ ಮುಂಜಾನೆ ಧಾತ್ರಿ ಎಂಬ ಹೆಣ್ಣು ಚೀತಾ ಶವವಾಗಿ ಪತ್ತೆಯಾಗಿದೆ. ಇದರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಚೀತಾದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಈಗ ಸಾವಿಗೆ ತುಪ್ಪಳ ಹೆಚ್ಚಾಗಿ ಉಂಟಾದ ಸೋಂಕು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ.

ಇದೀಗ ಕುನೋ ಅರಣ್ಯದಲ್ಲಿ 7 ಗಂಡು, 6 ಹೆಣ್ಣು ಚೀತಾ ಮತ್ತು 1 ಹೆಣ್ಣು ಚೀತಾ ಮರಿ ಸೇರಿದಂತೆ ಒಟ್ಟು 14 ಚೀತಾಗಳಿದ್ದು 1 ಹೆಣ್ಣು ಚೀತಾ ಅರಣ್ಯದಿಂದ ಆಚೆ ಸಾಗಿದ್ದು ಅದನ್ನು ತೀವ್ರ ನಿಗಾದಲ್ಲಿರಿಸಲಾಗಿದೆ. ವನ್ಯಜೀವಿ ಪಶುವೈದ್ಯರು ಹಾಗೂ ನಮೀಬಿಯಾದ ತಜ್ಞರ ತಂಡವು ಅವುಗಳ ಆರೋಗ್ಯದ ಮೇಲ್ವಿಚಾರಣೆಯನ್ನು ನಿಯಮಿತವಾಗಿ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!