ಹೊಸದಿಗಂತ ವರದಿ ಮಡಿಕೇರಿ:
ಸೆಲ್ಫಿ ತೆಗೆಯುವ ಸಂದರ್ಭ ಗುರುವಾರ ಸಂಜೆ ಹಾರಂಗಿಯಲ್ಲಿ ನೀರು ಪಾಲಾಗಿದ್ದ ಬೆಂಗಳೂರಿನ ಪ್ರವಾಸಿಗನ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.
ಬೆಂಗಳೂರು ವಿಜಯಪುರದ ಸಂದೀಪ್ (45), ತನ್ನ ಸ್ನೇಹಿತರಾದ ರಾಮಮೂರ್ತಿ, ರಂಜಿತ್, ಗೋವಿಂದರಾಜು ಅವರೊಂದಿಗೆ ಬುಧವಾರ ಕೊಡಗಿಗೆ ಆಗಮಿಸಿದ್ದು, ಗುರುವಾರ ಹಾರಂಗಿ ಜಲಾಶಯದ ವೀಕ್ಷಣೆಗೆಂದು ತೆರಳಿದ್ದರು.
ಸಂಜೆ ಅಣೆಕಟ್ಟೆ ಮುಂಭಾಗದಲ್ಲಿರುವ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆಯಲು ಮುಂದಾದಾಗ ಆಯ ತಪ್ಪಿ ನೀರಿಗೆ ಬಿದ್ದಿದ್ದರು. ವಿಷಯ ತಿಳಿದ ಕುಶಾಲನಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹಾರಂಗಿ ನದಿಯಲ್ಲಿ ಸಂದೀಪ್’ಗಾಗಿ ಶೋಧ ನಡೆಸಿದ್ದರು.
ಹಾರಂಗಿ ಜಲಾಶಯದ ಹೊರಹರಿವು ಸ್ಥಗಿತಗೊಳಿಸಿ ಪತ್ತೆ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ತಡರಾತ್ರಿವರೆಗೂ ಸಂದೀಪ್ ಪತ್ತೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆಯೇ ಅಗ್ನಿಶಾಮಕ ದಳ ಹಾಗೂ ದುಬಾರೆಯ ರ್ಯಾಫ್ಟಿಂಗ್ ತಂಡದಿಂದ ಶೋಧ ಕಾರ್ಯ ಆರಂಭಿಸಲಾಯಿತು. ಮಧ್ಯಾಹ್ನದ ವೇಳೆಗೆ ಸೇತುವೆಯ ಕೆಳಭಾಗದಲ್ಲೇ ಶವ ಪತ್ತೆಯಾಗಿದ್ದು, ಅದನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು.