ಹೊಸದಿಗಂತ ವರದಿ ಪುತ್ತೂರು:
ಪುತ್ತೂರು ಕಸ್ಬಾ ಗ್ರಾಮದ ಅಕ್ಷಯ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಭಾರತ್ ಒನ್ ಸೌಹಾರ್ಧ ಸಹಕಾರಿ ಸಂಘ ಮತ್ತು ಸದ್ರಿ ಸಂಸ್ಥೆಯ ಅಡಿಯಲ್ಲಿ ಕಾರ್ಯಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸೆಸ್ಸ್ ಎಂಬ ಟ್ರೇಡಿಂಗ್ ವ್ಯವಹಾರ ಸಂಸ್ಥೆಗಳು ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ ಠೇವಣಿ ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಒಳಮೊಗ್ರು ಗ್ರಾಮದ ನಿವಾಸಿಯಾದ ನಾರಾಯಣ ನಾಯ್ಕ (51) ಅವರು ನೀಡಿದ ದೂರಿನಂತೆ ಸಂಸ್ಥೆಯ ಅಧ್ಯಕ್ಷ ಗಿರೀಶ್ ರೈ , ಉಪಾಧ್ಯಕ್ಷ ವಿವಿಟ್ಟಾ ಟೆಲ್ಮಾ ಪಿಂಟೋ , ನಿರ್ದೇಶಕ ಸುದೇಶ್ ರೈ ಅಲೆಕ್ಕಾಡಿ, ಮ್ಯಾನೇಜರ್ ಸಂದೀಪ್ ಹಾಗೂ ಇತರ ನಿರ್ದೇಶಕರು ವಂಚಿಸಿದ್ದಾರೆಂದು ಹೇಳಿದ್ದಾರೆ.
2022ರ ಮಾರ್ಚ್ 11ರಿಂದ ನಾರಾಯಣ ನಾಯ್ಕ ಮತ್ತು ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸಂಗ್ರಹಿಸಿದ್ದಾರೆ. ತನ್ನ ಸಿಬ್ಬಂದಿಗಳಿಗೆ ಕೂಡ ಗುರಿಯನ್ನು ನಿಗದಿಪಡಿಸಿ ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿದ್ದಾರೆ. ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ ಠೇವಣಿ ಸಂಗ್ರಹಿಸಿದ ಹಣವನ್ನು ನಾರಾಯಣ ನಾಯ್ಕ ಹಾಗೂ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ವಾಪಾಸು ನೀಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾರೆಂದು ದೂರಿನಲ್ಲಿ ಹೇಳಿದ್ದಾರೆ.