ಚಳಿಗಾಲ ಬಂದಾಗ ಮಕ್ಕಳ ದೈನಂದಿನ ಆರೈಕೆ ಪೋಷಕರಿಗೆ ಸ್ವಲ್ಪ ಹೆಚ್ಚುವರಿ ಜವಾಬ್ದಾರಿಯಾಗುತ್ತದೆ. ವಿಶೇಷವಾಗಿ ಸ್ನಾನ ಮಾಡುವ ವಿಷಯದಲ್ಲಿ ಮಾಡಿದ ಸಣ್ಣ ತಪ್ಪು ಕೂಡ ಮಕ್ಕಳ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಶೀತ ವಾತಾವರಣದಲ್ಲಿ ಮಕ್ಕಳ ದೇಹ ಹೆಚ್ಚು ಸೂಕ್ಷ್ಮವಾಗಿರುವುದರಿಂದ, ಸ್ನಾನವನ್ನು ಹೇಗೆ, ಎಷ್ಟು ಬಾರಿ ಮತ್ತು ಯಾವ ಮುನ್ನೆಚ್ಚರಿಕೆಗಳೊಂದಿಗೆ ಮಾಡಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ.
ವಾರಕ್ಕೆ ಎಷ್ಟು ಬಾರಿ ಸ್ನಾನ ಸಾಕು?:
ತಜ್ಞರ ಅಭಿಪ್ರಾಯದಂತೆ, ಚಳಿಗಾಲದಲ್ಲಿ ಮಕ್ಕಳಿಗೆ ಪ್ರತಿದಿನ ಸ್ನಾನ ಮಾಡಿಸುವ ಅಗತ್ಯವಿಲ್ಲ. ವಾರಕ್ಕೆ 2 ರಿಂದ 3 ಬಾರಿ ಸ್ನಾನ ಮಾಡಿದರೆ ಸಾಕು. ಅತಿಯಾಗಿ ಸ್ನಾನ ಮಾಡಿಸಿದರೆ ಚರ್ಮದ ನೈಸರ್ಗಿಕ ಎಣ್ಣೆ ಕಳೆದುಹೋಗಿ ಒಣತನ, ಶೀತ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಆಯುರ್ವೇದದ ಪ್ರಕಾರ, ಚಳಿಗಾಲದಲ್ಲಿ ವಾತ ದೋಷ ಹೆಚ್ಚಾಗುವ ಕಾರಣ ಸ್ನಾನವನ್ನು ಮಿತವಾಗಿಡುವುದು ಒಳಿತು.
ಮಕ್ಕಳ ಕೂದಲು ಎಷ್ಟು ಬಾರಿ ತೊಳೆಯಬೇಕು?:
ಚಳಿಗಾಲದಲ್ಲಿ ಕೂದಲನ್ನು ಬೇಸಿಗೆಯಷ್ಟು ಬಾರಿ ತೊಳೆಯಬಾರದು. ಸಾಮಾನ್ಯವಾಗಿ ವಾರಕ್ಕೆ 1–2 ಬಾರಿ ತಲೆ ಸ್ನಾನ ಸಾಕು. ಒಂದು ವರ್ಷದೊಳಗಿನ ಶಿಶುಗಳಿಗೆ ವಾರಕ್ಕೆ ಒಂದು ಬಾರಿ ತೊಳೆಯುವುದೇ ಉತ್ತಮ. ಎಣ್ಣೆಯುಕ್ತ ಕೂದಲಿದ್ದರೆ ಸ್ವಲ್ಪ ಹೆಚ್ಚಾಗಿ, ಒಣ ಕೂದಲಿದ್ದರೆ ಕಡಿಮೆ ಬಾರಿ ತೊಳೆಯಬೇಕು.
ಸ್ನಾನ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆಗಳು:
ಮಕ್ಕಳಿಗೆ ಯಾವಾಗಲೂ ಬೆಚ್ಚಗಿನ ನೀರನ್ನೇ ಬಳಸಿ. ಸೂರ್ಯೋದಯದ ಬಳಿಕ ಅಥವಾ ಸೂರ್ಯಾಸ್ತದ ಮೊದಲು ಸ್ನಾನ ಮಾಡಿಸುವುದು ಸೂಕ್ತ. ಸ್ನಾನವಾದ ತಕ್ಷಣ ದೇಹ ಒರೆಸಿ, ಬೆಚ್ಚಗಿನ ಬಟ್ಟೆ ಧರಿಸಿಸಿ, ಮಾಯಿಶ್ಚರೈಸರ್ ಅಥವಾ ತೆಂಗಿನ ಎಣ್ಣೆ ಹಚ್ಚಬೇಕು. ಹತ್ತಿ ಮತ್ತು ಬೆಚ್ಚಗಿನ ಬಟ್ಟೆಗಳು ಮಕ್ಕಳಿಗೆ ಆರಾಮಕರವಾಗುತ್ತವೆ.

