ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆವಿದೆ.
ಇದರ ನಡುವೆ ಇತ್ತ ಉತ್ತರ ಪ್ರದೇಶದ (Uttar Pradesh) ಅಲಿಗಢದ ಕುಶಲಕರ್ಮಿಯೊಬ್ಬರು ಶ್ರೀರಾಮನ ಮಂದಿರಕ್ಕೆ ವಿಶಿಷ್ಟ ಕಾಣಿಕೆಯೊಂದನ್ನು ನೀಡಲು ಮುಂದಾಗಿದ್ದಾರೆ.
ಹೌದು, ಅಲಿಗಢದ ಸತ್ಯ ಪ್ರಕಾಶ್ ಶರ್ಮಾ (Satya Prakash Sharma) ಅವರು 400 ಕಿಲೋ ಗ್ರಾಮ್ ತೂಕದ ಬೃಹತ್ ಬೀಗವನ್ನು ತಯಾರಿಸಿದ್ದು(World’s Largest 400 Kg Lock), ರಾಮ ಮಂದಿರಕ್ಕೆ ನೀಡಲಿದ್ದಾರೆ.
ಶರ್ಮಾ ಅವರುಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾಗಿದ್ದು, ರಾಮ ಮಂದಿರಕ್ಕೆ ನೀಡಲಿರುವ ಬೀಗವು, ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಬೀಗ ಎಂಬ ಖ್ಯಾತಿ ಗಳಿಸಿದೆ. ಅವರು ಈ ಬೀಗವನ್ನು ತಯಾರಿಸಲು ಅವರು ಹಲವು ತಿಂಗಳುಗಳ ಕಾಲ ಶ್ರಮಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು, ತಾವು ಸಾಕಷ್ಟು ಭಕ್ತರಿಂದ ಕಾಣಿಕೆ ಸ್ವೀಕರಿಸುತ್ತಿದ್ದು, ದೇವಾಲಯದಲ್ಲಿರುವ ದೊಡ್ಡ ಬೀಗವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸಲಾಗುವುದು ಎಂದು ಹೇಳಿದ್ದಾರೆ.
ಈ ಬೀಗವು 10 ಅಡಿ ಎತ್ತರ ಮತ್ತು 4.5 ಅಡಿ ಅಗಲ ಹಾಗೂ 9.5 ಇಂಚ್ ದಪ್ಪ ಇದೆ. ಈ ಬೀಗದ ಕೈ 4 ಅಡಿ ಉದ್ದವಿದೆ. ಅಲಿಗಢದಲ್ಲಿ ಕಳೆದ ವರ್ಷ ನಡೆದ ಪ್ರದರ್ಶನದಲ್ಲಿ ಈ ಬೀಗವನ್ನು ಪ್ರದರ್ಶನಕ್ಕಿಡಲಾಗಿತ್ತು. ಸದ್ಯ, ಬೀಗದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಿದ್ದೇನೆ. ಬೀಗ ಪರಿಪೂರ್ಣವಾಗಿ ಕಾಣಲು ವಿಶಿಷ್ಟ ವಿನ್ಯಾಸವನ್ನು ಮಾಡುತ್ತಿದ್ದೇನೆ ಎಂದು ಶರ್ಮಾ ಅವರು ಹೇಳಿದ್ದಾರೆ.
ಕೈಯಿಂದ ಮಾಡಿದ ವಿಶ್ವದ ಅತಿದೊಡ್ಡ ಬೀಗಕ್ಕೆ ಶರ್ಮಾ ದಂಪತಿ ಸುಮಾರು 2 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ತಮ್ಮ ಕನಸಿನ ಈ ಬೀಗವನ್ನು ತಯಾರಿಸಲು ಅವರು ಉಳಿಕೆಯ ಹಣವನ್ನು ಸುರಿದಿದ್ದಾರೆ. ಶರ್ಮಾ ಅವರ ಕುಟುಂಬವು ಒಂದು ಶತಮಾನಕ್ಕಿಂತಲೂ ಅಧಿಕ ಕಾಲದಿಂದಲೂ ಬೀಗಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಶರ್ಮಾ ಸ್ವತಃ 45 ವರ್ಷಗಳಿಂದ ‘ತಾಲ ನಗರಿ’ ಅಥವಾ ಬೀಗಗಳ ನಾಡು ಎಂದು ಕರೆಯಲಾಗುವ ಅಲಿಗಢನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.